ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತರಿಗೆ ಕಿರುಕುಳ: ಚಿಕ್ಕಮಗಳೂರು ಜಿಪಂ ಸಭೆಯಲ್ಲಿ ಸದಸ್ಯ ಶರತ್ ಆರೋಪ
ಸಂಸ್ಥೆಯನ್ನು ವಜಾ ಮಾಡಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯ
ಚಿಕ್ಕಮಗಳೂರು, ಜೂ.28: ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಅಪ್ರಾಪ್ತ ಗರ್ಭಿಣಿಯರನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಯೊಂದು ದೌರ್ಜನ್ಯಕ್ಕೊಳಗಾದವರನ್ನು ಆರೈಕೆ ಮಾಡಿ ಪುನರ್ವಸತಿ ನೀಡುವ ಬದಲು ಸಂತ್ರಸ್ಥೆಯರಿಗೆ ಕಿರುಕುಳ ನೀಡುತ್ತಿದೆ. ಇದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಆರೋಪಿಸಿದ್ದು, ಸಂಸ್ಥೆಯನ್ನು ವಜಾ ಮಾಡಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ನಝೀರ್ ಸಾಬ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇಂತಹ ಸಂತ್ರಸ್ಥರ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಬಾಲ ಮಂದಿರದಂತಹ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಿಲ್ಲ ಎಂದು ಆರೋಪಿದರು.
ನಗರ ಸಮೀಪದ ಕದ್ರಮಿದ್ರಿಯಲ್ಲಿರುವ ಸರ್ವೋದಯ ಎಂಬ ಹೆಸರಿನ ಸಂಸ್ಥೆಯೊಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಪುನರ್ವಸತಿ ಕಲ್ಪಿಸಿದೆಯಾದರೂ ಈ ಸಂಸ್ಥೆಯಲ್ಲಿರುವ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಗರ್ಭಿಣಿಯರಿಗೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ದೌರ್ಜನ್ಯಕ್ಕೊಳಗಾದ 17 ವರ್ಷದ ಸಂತ್ರಸ್ಥೆಯೊಬ್ಬರು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಸಂಸ್ಥೆ ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಿದ್ದಾಳೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿರುವ ಈ ಬಾಲಕಿ ಬಳಿಯೇ ಸಂಸ್ಥೆ ಕೆಲಸ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಹೊಟ್ಟೆ ನೋವು ಬಂದಾಗ ಆಸ್ಪತ್ರೆಗೆ ಕರೆದೊಯ್ಯದೇ ಜೀರಿಗೆ ನೀರು ಕುಡಿದು ಮಲಗುವಂತೆ ಹೇಳುತ್ತಿದ್ದಾರೆ. ರಾತ್ರಿ ವೇಳೆ ಸಂಸ್ಥೆಯ ಸಿಬ್ಬಂದಿ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ಥರ ಯೋಗಕ್ಷೇಮ ನೋಡಿಕೊಳ್ಳದೇ ದೂರದಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಈ ದೂರನ್ನು ಸಂತ್ರಸ್ಥೆಯೇ ಹೇಳಿಕೊಂಡಿದ್ದು, ಇಂತಹ 5ಕ್ಕೂ ಹೆಚ್ಚು ಪ್ರಕರಣಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಮುಂದಿವೆ ಎಂದರು.
ಈ ಸಂಸ್ಥೆಯಲ್ಲಿ ಈ ಹಿಂದೆ 8 ಮಂದಿ ಸಂತ್ರಸ್ಥರು ಮೃತಪಟ್ಟಿದ್ದಾರೆಂದು ಸಭೆಗೆ ಮಾಹಿತಿ ನೀಡಿದ ಅವರು, ಸರ್ವೋದಯ ಸಂಸ್ಥೆ ಅನಾಥ ಮಕ್ಕಳನ್ನು ಸಲಹುತ್ತ ಮಕ್ಕಳಿಲ್ಲದವರಿಗೆ ಇಂತಹ ಮಕ್ಕಳನ್ನು ದತ್ತು ನೀಡುತ್ತಿದೆ. ಒಂದು ಮಗುವನ್ನು ದತ್ತು ನೀಡಿದರೆ ಸಂಸ್ಥೆಗೆ 40 ಲಕ್ಷ ರೂ. ಸಿಗುತ್ತದೆ. ಬೇರೆ ದೇಶದವರಿಗೆ ದತ್ತು ನೀಡಿದರೇ 3 ಲಕ್ಷಕ್ಕೂ ಹೆಚ್ಚು ಹಣ ಸಿಗುತ್ತದೆ. ಈ ಕಾರಣಕ್ಕೆ ಸಂಸ್ಥೆ ಅನಾಥ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರ ಬಗ್ಗೆ ತಾತ್ಸಾರ ಮನೋಭಾವ ತಳೆದಿದೆ. ಆದರೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಸಂಸ್ಥೆ ಹಾಗೂ ಈ ಘಟನೆಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಸ್ಥೆಯನ್ನು ಕೂಡಲೇ ವಜಾ ಮಾಡಿ ಕಾನೂನು ಕ್ರಮಕೈಗೊಳ್ಳಬೇಕೆಂದು ಶರತ್ ಆಗ್ರಹಿಸಿದರು.
ಈ ವೇಳೆ ಸಭೆಯಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ, ಕಳೆದ ಸಾಲಿನಿಂದ ಸರಕಾರ ಅನುದಾನ ಬಿಡುಗಡೆ ಮಾಡದಿರುವುದಕ್ಕೆ ಪುನರ್ವಸತಿ ಒದಗಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದು, ಪ್ರಸಕ್ತ ಬಾಲ ಮಂದಿರ ನಿರ್ಮಾಣಕ್ಕೆ ಸರಕಾರ ಅನುದಾನ ನೀಡಿದ್ದು, ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಆರೋಪಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸಂತ್ರಸ್ಥರ ಪುನರ್ವಸತಿಗೆ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಬಾಲ ಮಂದಿರದ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು







