ದಯಾನತ್ ಖಾನ್ ಕೊಲೆ ಖಂಡಿಸಿ ದಲಿತ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ
ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯ

ದಾವಣಗೆರೆ, ಜೂ.29: ಹೊನ್ನಾಳಿ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಯುವಕ ದಯಾನತ್ ಖಾನ್ ಕೊಲೆ ಪ್ರಕರಣದ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ಆತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ದಲಿತ ಮತ್ತು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ನಂತರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. 'ದಯಾನತ್ ಖಾನ್‍ನನ್ನು ಆತನ ಸ್ನೇಹಿತರೇ ಕೊಲೆ ಮಾಡಿದ್ದು, ಇದುವರೆಗೆ ಕೇವಲ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸದಿರುವುದರಿಂದ ರಾಜಕೀಯ ಒತ್ತಡಕ್ಕೆ ಮಣಿದಿರುವ ಅನುಮಾನ ಮೂಡಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಎಂದು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಿ ಈ ಕೃತ್ಯದ ಹಿಂದಿರುವ ಸಂಚನ್ನು ಬಯಲಿಗೆಳೆಯಬೇಕು. ನ್ಯಾಯಾಂಗ ತನಿಖೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
'ದೇಶದಾದ್ಯಂತ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿ ಗುಂಪು ಹತ್ಯೆಗಳು ನಡೆಯುತ್ತಿದ್ದು, ಜಾರ್ಖಂಡ್‍ನಲ್ಲಿ ನಡೆದ ತಬ್ರೇಜ್ ಅನ್ಸಾರಿಯ ಕೊಲೆ ಇದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲೂ ಇಂತಹ ಸಂಚುಗಳು ನಡೆಯುತ್ತಿವೆ. ಗುಂಡ್ಲುಪೇಟೆಯ ದಲಿತ ಯುವಕನ ಬೆತ್ತಲ ಮೆರವಣಿಗೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಚಿತ್ರದುರ್ಗದಲ್ಲಿ ಬಜರಂಗದಳದಿಂದ ತ್ರಿಶೂಲ ದೀಕ್ಷೆ ತರಬೇತಿ ನಡೆಸಲಾಗಿದ್ದು, ಇದರ ಪ್ರೇರಣೆಯೇ ದಯಾನತ್ ಖಾನ್ ಕೊಲೆಗೆ
ಕಾರಣ. ಮೃತನ ದೇಹದಲ್ಲಿ 30ಕ್ಕೂ ಹೆಚ್ಚು ಇರಿತದ ಗಾಯಗಳಾಗಿದ್ದು, ಅದು ಇಬ್ಬರು ಆರೋಪಿಗಳು ನಡೆಸಿದ ಕೃತ್ಯವಲ್ಲ. ಕೊಲೆಗೆ ಸಂಬಂಧಿಸಿದ ಪೂರಕ ಆಯುಧವನ್ನು ಪತ್ತೆ ಹಚ್ಚಿ ಅದರ ಹಿಂದಿರುವ ನಿಗೂಢ ಸಂಚನ್ನು ಬಯಲಿಗೆಳೆಯಬೇಕು' ಎಂದು ಆಗ್ರಹಿಸಿದರು.
ಪಿಎಫ್‍ಐಯ ಫಯಾಝ್, ದಲಿತ ಸಂಘಟನೆಯ ಮಹಾಂತೇಶ್, ಕೋಮು ಸೌಹಾರ್ದ ವೇದಿಕೆಯ ಇಸ್ಮಾಯಿಲ್, ಅಂಜುಮಾನ್ ಸಂಘಟನೆಯ ಕಾರ್ಯದರ್ಶಿ ರಜ್ವಿ, ಅಮಾನುಲ್ಲಾ ಖಾನ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







