ಬಗಂಬಿಲ: ಪ್ರೇಮಿಯಿಂದ ಇರಿತಕ್ಕೊಳಗಾದ ಯುವತಿಗೆ ಚಿಕಿತ್ಸೆ ಮುಂದುವರಿಕೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ: ಆಕ್ರೋಶ

ಕೊಣಾಜೆ: ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲಿ ಶುಕ್ರವಾರದಂದು ಪ್ರೇಮಿಯಿಂದ ಮಾರಣಾಂತಿಕವಾಗಿ ಇರಿತಕ್ಕೊಳಗಾದ ಯುವತಿಯು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಯುವತಿಯ ಇರಿದು ತನ್ನದೇ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿ ಪೊಲೀಸರ ತನಿಖೆ ಎದುರಿಸುತ್ತಿದ್ದಾನೆ.
ಶುಕ್ರವಾರ ಸಂಜೆ ಬಗಂಬಿಲ ಶಾಂತಿಧಾಮದ ರಸ್ತೆಯಾಗಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ದೀಕ್ಷಾ ಕೋಟ್ಯಾನ್(21)ರನ್ನು ಶಕ್ತಿನಗರ ರಾಮಶಕ್ತಿ ಮಿಷನ್ ಬಳಿ ನಿವಾಸಿ ಸುಶಾಂತ್ (27)ಎಂಬ ಯುವಕನು ಸ್ಕೂಟರಲ್ಲಿ ಬಂದು ಅಡ್ಡಕಟ್ಟಿ ದೀಕ್ಷಾಳ ಎದೆ,ಕೈ,ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಅದೇ ಚಾಕುವಿನಿಂದ ತನ್ನದೇ ಕತ್ತನ್ನು ಕುಯ್ದು ಆತ್ಮ ಹತ್ಯೆಗೆ ಯತ್ನಿಸಿದ್ದ. ಘಟನೆಯನ್ನು ಸ್ಥಳೀಯರು ನೋಡುತ್ತಿದ್ದರೂ ಅವರಿಗೆ ಚಾಕು ತೋರಿಸಿ ಹತ್ತಿರ ಬಾರದಂತೆ ಸುಶಾಂತ್ ಬೆದರಿಸಿದ್ದ. ರಕ್ತ ಸ್ರಾವದಿಂದ ಸುಶಾಂತ್ ಕೂಡಾ ಕುಸಿದು ಬಿದ್ದಿದ್ದು ಕೂಡಲೇ ಇಬ್ನರೂ ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಸುಶಾಂತ್ ನ ಕುತ್ತಿಗೆಗೆ ಶಸ್ತ್ರ ಚಿಕಿತ್ಸೆ ನಡೆಸಿದ ಪರಿಣಾಮ ಶುಕ್ರವಾರ ರಾತ್ರಿಯೇ ಚೇತರಿಸಿಕೊಂಡಿದ್ದು,ಶನಿವಾರ ಬೆಳಿಗ್ಗೆ ಆತನನ್ನು ಆಸ್ಪತ್ರೆಯ ಜೈಲ್ ವಾರ್ಡ್ ಗೆ ಶಿಪ್ಟ್ ಮಾಡಿದ್ದು ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ದೀಕ್ಷ: ಜಾಲತಾಣ ಸುಳ್ಳು ಸಂದೇಶ
ಮನೆಗೆ ವಾಪಸ್ಸಾಗುವಾಗ 12 ಬಾರಿ ಇರಿತಕ್ಕೊಳಗಾದ ದೀಕ್ಷಾಗೆ ಶುಕ್ರವಾರ ರಾತ್ರಿಯೇ ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶನಿವಾರದಂದು ಆಕೆ ವೈದ್ಯರ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದು, ಪೋಷಕರ ಕೈಗಳನ್ನು ಹಿಡಿದುದರ ಬಗ್ಗೆ ಮಾಹಿತಿ ಲಭಿಸಿದೆ. ಆಕೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯಾವಕಾಶಬೇಕೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಕೆಲವರು ಹರಿಯಬಿಟ್ಟು ಗೊಂದಲವುಂಟು ಮಾಡಿದ್ದರು.
ಸುಶಾಂತ್ ಜೊತೆ ಅಂತರ ಕಾಯ್ದುಕೊಂಡಿದ್ದ ದೀಕ್ಷಾ:
ದೇರಳಕಟ್ಟೆಯ ಬಗಂಬಿಲ ನಿವಾಸಿಗಳಾದ ಜಯಂತ್ ಪೂಜಾರಿ, ಮೋಹಿನಿ ದಂಪತಿಗಳ ಹಿರಿಯ ಪುತ್ರಿ ದೀಕ್ಷಾ ಕೋಟ್ಯಾನ್ ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ನಡೆಸುತ್ತಿದ್ದಾಳೆ. ಈಕೆ ನೃತ್ಯಪಟುವಾಗಿದ್ದು ಈಕೆಗೆ ಕೊರಿಯೋಗ್ರಾಫರ್ ಆಗಿರುವ ಸುಶಾಂತ್ ಕಳೆದ ಕೆಲ ವರುಷಗಳ ಹಿಂದೆಯೇ ನೃತ್ಯ ತರಬೇತಿ ನೀಡಿದ್ದ, ಅಲ್ಲಿಂದ ಇಬ್ಬರೂ ಸಲುಗೆಯಿಂದಿದ್ದರೆನ್ನಲಾಗಿದೆ.ದೀಕ್ಷಾ ಕಾರ್ಕಳದಲ್ಲಿ ವ್ಯಾಸಂಗ ಶುರು ಮಾಡಿದ ನಂತರ ಸುಶಾಂತ್ ನಡುವೆ ಅಂತರ ಕಾಯ್ದುಕೊಂಡಿದ್ದು,ಇದರಿಂದ ವಿಚಲಿತನಾಗಿದ್ದ ಸುಶಾಂತ್ ಕಾರ್ಕಳಕ್ಕೂ ತೆರಳಿ ದೀಕ್ಷಾ ಜೊತೆ ಗಲಾಟೆ ಎಬ್ಬಿಸಿದ್ದ. ಬಳಿಕ ಆಕೆ ಅಲ್ಲಿಯ ಪೊಲೀಸರಿಗೆ ದೂರು ನೀಡಿದ್ದಳು.
ವಿಕೃತಿ ಮೆರೆದ ವೀಡಿಯೋ ವೈರಲ್:
ಕಾರ್ಕಳದಿಂದ ದೀಕ್ಷಾ ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದು, ಶುಕ್ರವಾರ ಸಂಜೆ ಆಕೆ ಮನೆಗೆ ಬರುವ ಖಚಿತ ಮಾಹಿತಿ ಪಡೆದ ಸುಶಾಂತ್ ಆಕೆಯ ಮನೆ ದಾರಿಯಲ್ಲೇ ಕಾದು ನಿಂತು ಆಕೆಯನ್ನು ಅಡ್ಡಗಟ್ಟಿ ಇರಿದಿದ್ದಾನೆ. ಇರಿತದ ಘಟನೆಯನ್ನು ಪಕ್ಕದ ಆಸ್ಪತ್ರೆಯ ಕಟ್ಟಡದಲ್ಲಿದ್ದ ಜನರು ಮೊಬೈಲ್ ಗಳಲ್ಲಿ ಚಿತ್ರೀಕರಿಸಿದ್ದು ಪ್ರೀತಿ ಹೆಸರಲ್ಲಿ ವಿಕೃತಿ ಮೆರೆದ ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ.







