ಸಂಚಾರಿ ಠಾಣಾಧಿಕಾರಿಯಿಂದ ಆಟೊ ಚಾಲಕರಿಗೆ ಕಿರುಕುಳ ಆರೋಪ: ಶಾಸಕ ಸಿ.ಟಿ ರವಿ ಮನೆ ಮುಂದೆ ಧರಣಿ

ಚಿಕ್ಕಮಗಳೂರು, ಜೂ.29: ನಗರ ಸಂಚಾರಿ ಪೊಲೀಸ್ ಅಧಿಕಾರಿ ಆಟೊ, ಬೈಕ್ ಸೇರಿದಂತೆ ವಿವಿಧ ವಾಹನ ಚಾಲಕರಿಗೆ ಕ್ಷುಲ್ಲಕ ಕಾರಣಗಳಿಗೂ ಭಾರೀ ದಂಡ ವಿಧಿಸುತ್ತಾ ಕಿರುಕುಳ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಸಾಗಾಟ ಮಾಡುವ ಪ್ರಯಾಣಿಕರ ವಾಹನಗಳಿಗೂ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ಆಟೊ ಚಾಲಕರು, ಮಾಲಕರು ಕನ್ನಡ ಸೇನೆ ಸಂಘದ ಮುಖಂಡ ನೂರುಲ್ಲಾ ಖಾನ್ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಶಾಸಕ ಸಿ.ಟಿ.ರವಿ ನಿವಾಸದ ಎದುರು ಧರಣಿ ನಡೆಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ನಗರ ಸಂಚಾರಿ ಪೊಲೀಸ್ ಠಾಣೆಯ ಎಸ್ಸೈ ಆಗಿ ವರ್ಗಾವಣೆಗೊಂಡು ಬಂದಿರುವ ಸಂಚಾರಿ ಪೊಲೀಸ್ ಠಾಣಾಧಿಕಾರಿ ರಮ್ಯಾ ಅವರು ನಗರದಾದ್ಯಂತ ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ಚಿಕ್ಕಮಗಳೂರು ಸಣ್ಣ ನಗರವಾಗಿದ್ದು, ರಸ್ತೆಗಳು ಕಿರಿದಾಗಿವೆ. ಆಟೊ ಚಾಲಕರು ಇಂತಹ ರಸ್ತೆಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ವೇಳೆ ಸುಖಾಸುಮ್ಮನೆ ಅಡ್ಡಹಾಕುವ ಸಂಚಾರಿ ಠಾಣಾಧಿಕಾರಿ ರಮ್ಯಾ, ದಾಖಲೆಗಳನ್ನು ಕೇಳುವ ನೆಪದಲ್ಲಿ, ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ನೆಪದಲ್ಲಿ, ಶಾಲಾ ಮಕ್ಕಳ ಸಾಗಾಟ ನೆಪದಲ್ಲಿ ಭಾರೀ ದಂಡ ವಿಧಿಸುತ್ತಿದ್ದಾರೆ. ಪ್ರಶ್ನಿಸಿದರೆ ದೂರು ದಾಖಲಿಸುತ್ತಾ ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ನೂರುಲ್ಲಾ ಖಾನ್ ದೂರಿದರು.
ಧರಣಿ ನಿರತರ ದೂರು ಆಲಿಸಿ ಮಾತನಾಡಿದ ಶಾಸಕ ಸಿಟಿ ರವಿ, ಆಟೊ ಸಂಚಾರಿ ಪೊಲೀಸ್ ಅಧಿಕಾರಿ ರಮ್ಯಾ ಅವರು ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಆಲಿಸಿದ್ದೇನೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸೋಮವಾರ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಸೋಮವಾರ ಎಸ್ಪಿ ಅವರೊಂದಿಗೆ ಸಭೆ ನಡೆಸಿ ರಮ್ಯಾ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾದ್ಯಂತ ಬಂದ್‍ಗೆ ಕರೆ ನೀಡಲಾಗುವುದೆಂದು ಇದೇ ವೇಳೆ ನೂರುಲ್ ಖಾನ್ ಎಚ್ಚರಿಕೆ ನೀಡಿದರು.







