ಜು.3: ದ.ಕ., ಉಡುಪಿಯಲ್ಲಿ ಗೋವಂಶ ರಕ್ಷಣೆಗೆ ಒತ್ತಾಯಿಸಿ ಧರಣಿ

ಮಂಗಳೂರು, ಜೂ. 29: ಗೋವಂಶ ರಕ್ಷಣೆಗೆ ಒತ್ತಾಯಿಸಿ ವಿಹಿಂಪ, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ಜು.3ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯ ತಾಲೂಕಿನಾದ್ಯಂತ ಧರಣಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ವಿಹಿಂಪ ಪ್ರಾಂತ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ಇತ್ತೀಚೆಗೆ ಗೋಕಳ್ಳತನ, ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಹತ್ಯೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಗೋಕಳ್ಳರು ಮನೆಗೇ ನುಗ್ಗಿ ಹಟ್ಟಿಗಳಿಂದ ಕಳವು ಮಾಡುತ್ತಿರುವುದು ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಗೋರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಡಿಸಿ ಕಚೇರಿ ಮುಂಭಾಗದಲ್ಲಿ ಬೆಳಗ್ಗೆ 10:30ಕ್ಕೆ ಸಭೆ ನಡೆಯಲಿದೆ. ಅಲ್ಲದೆ, ಉಭಯ ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದರು.
ವಿಹಿಂಪ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶೇಣವ ಮಾತನಾಡಿ, ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ಹೆಚ್ಚಳವಾಗಲು ಅಕ್ರಮ ಕಸಾಯಿಖಾನೆಗಳೇ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಬೀಫ್ ಸ್ಟಾಲ್‌ಗಳಿವೆ. ಅಕ್ರಮ ಕಸಾಯಿಖಾನೆಗಳಿಂದಲೇ ಅವುಗಳಿಗೆ ಬೀಫ್ ಸರಬರಾಜಾಗುತ್ತಿದೆ. ಹೀಗಾಗಿ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿಂಜಾವೇ ವಿಭಾಗ ಅಧ್ಯಕ್ಷ ಕಿಶೋರ್‌ಕುಮಾರ್, ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.








