ರಸಪ್ರಶ್ನೆ ಸ್ಪರ್ಧೆ: ಅಮೆರಿಕದಲ್ಲಿ 69 ಲಕ್ಷ ರೂ. ಗೆದ್ದ ಭಾರತೀಯ
ನ್ಯೂಯಾರ್ಕ್, ಜೂ. 29: ಅಮೆರಿಕದ 2019ರ ‘ಟೀನ್ ಜಿಯೋಪಾರ್ಡಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾರತೀಯ ಅಮೆರಿಕನ್ ತರುಣ ಅವಿ ಗುಪ್ತ ವಿಜಯಿಯಾಗಿದ್ದು, ಒಂದು ಲಕ್ಷ ಡಾಲರ್ (ಸುಮಾರು 69 ಲಕ್ಷ ರೂಪಾಯಿ) ನಗದು ಪುರಸ್ಕಾರವನ್ನು ಪಡೆದಿದ್ದಾರೆ.
ಒರೆಗಾನ್ ರಾಜ್ಯದ ಪೋರ್ಟ್‌ಲ್ಯಾಂಡ್ ನಗರದವರಾಗಿರುವ ಅವಿ ಗುಪ್ತರ ರಸಪ್ರಶ್ನೆ ಕಾರ್ಯಕ್ರಮವು ಶುಕ್ರವಾರ ಪ್ರಸಾರಗೊಂಡಿತು. ಇದು ಅಮೆರಿಕದ ಅತ್ಯಂತ ಜನಪ್ರಿಯ ರಸಪ್ರಶ್ನೆ ಸ್ಪರ್ಧೆಯಾಗಿದೆ.
ಸ್ಪರ್ಧೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರು ಇತರ ಮೂವರು ಭಾರತೀಯ-ಅಮೆರಿಕನ್ ತರುಣರನ್ನು ಹಿಮ್ಮೆಟ್ಟಿಸಿದ್ದಾರೆ.
ಜ್ಞಾನ ಯಾಕೆ ಬೇಕು?
ಸ್ಪರ್ಧೆಯ ವೇಳೆ, ಕಾರ್ಯಕ್ರಮದ ನಿರೂಪಕ ಅಲೆಕ್ಸ್ ಟ್ರೆಬೆಕ್ ಜೊತೆ ಮಾತನಾಡಿದ ಅವಿ ಗುಪ್ತ, ಮಾಹಿತಿಗಳನ್ನು ಗೂಗಲ್‌ನಲ್ಲಿ ಪಡೆಯಲು ಸಾಧ್ಯವಿರುವಾಗ ಅವುಗಳನ್ನು ತಲೆಯಲ್ಲಿ ತುಂಬಿಸಿಕೊಳ್ಳುವ ಅವಶ್ಯಕತೆ ಏನಿದೆ ಎಂಬುದಾಗಿ ಜನರು ಪ್ರಶ್ನಿಸುತ್ತಿದ್ದರು ಎಂದು ಹೇಳಿದರು.
ಅಗಾಧ ಜ್ಞಾನವನ್ನು ಬೆಳೆಸುವುದು ಅಗತ್ಯ ಎಂದು ಹೇಳಿದ ಅವರು, ವಾದಗಳು ಮತ್ತು ಕಲ್ಪನೆಗಳನ್ನು ವಾಸ್ತವಿಕ ಅಂಶಗಳ ಮೇಲೆ ಮಾತ್ರ ಬೆಳೆಸಬಹುದು ಎಂದರು.