ರಾಷ್ಟ್ರೀಯ ಐಎಂಎ ಪ್ರಶಸ್ತಿಗೆ ಡಾ.ಸಂತೋಷ್ ಸೋನ್ಸ್ ಆಯ್ಕೆ
ರಾಜ್ಯ ಪ್ರಶಸ್ತಿಗೂ ಆಯ್ಕೆ

ಮಂಗಳೂರು, ಜೂ.29: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸ್ಥಾಪಿಸಿದ ಪ್ರತಿಷ್ಠಿತ ‘ಐಎಂಎ ವೈದ್ಯರ ದಿನ ಪ್ರಶಸ್ತಿ 2019’ಗೆ ಮಂಗಳೂರಿನ ಪ್ರಖ್ಯಾತ ಶಿಶುವೈದ್ಯ ಡಾ.ಸಂತೋಷ್ ಟಿ. ಸೋನ್ಸ್ ಆಯ್ಕೆಯಾಗಿದ್ದಾರೆ.
ಹೊಸದಿಲ್ಲಿಯ ಐಎಂಎ ಹೌಸ್‌ನಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಜು.1ರಂದು ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಡಾ.ಸೋನ್ಸ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ವೈದ್ಯರ ದಿನದಂದು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ ನಾಯಕರು ಮತ್ತು ಸದಸ್ಯರನ್ನು ಐಎಂಎ ಗೌರವಿಸುತ್ತದೆ. ಈ ವರ್ಷ ಡಾ.ಸೋನ್ಸ್ ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ ಎಂದು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಸಂತನು ಸೇನ್ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್ ಪತ್ರವೊಂದರಲ್ಲಿ ತಿಳಿಸಿದ್ದಾರೆ.
ಡಾ.ಸೋನ್ಸ್ ರಾಜ್ಯ ಪ್ರಶಸ್ತಿಗೂ ಆಯ್ಕೆ: ಖ್ಯಾತ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ ಮತ್ತು ಭಾರತರತ್ನ ಪ್ರಶಸ್ತಿ ಪುರಸ್ಕೃತ ಡಾ.ಬಿ.ಸಿ.ರಾಯ್ ಅವರನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಸ್ಮರಿಸಲಾಗುತ್ತದೆ. ಐಎಂಎಯ ಕರ್ನಾಟಕ ರಾಜ್ಯ ಶಾಖೆಯು ಕೂಡ ತನ್ನ ಐಎಂಎ-ಕೆಎಸ್‌ಬಿ ವೈದ್ಯರ ದಿನದ ಪ್ರಶಸ್ತಿಯನ್ನು ಡಾ.ಸಂತೋಷ್ ಟಿ. ಸೋನ್ಸ್ ಅವರಿಗೇ ನೀಡಲು ಆಯ್ಕೆ ಮಾಡಿದೆ. ಭಾರತೀಯ ವೈದ್ಯಕೀಯ ಸಂಘ, ವೃತ್ತಿ ಮತ್ತು ಸಾರ್ವಜನಿಕರಿಗೆ ಸಲ್ಲಿಸಿದ ವಿಶಿಷ್ಟ ಸೇವೆಗಳಿಗಾಗಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಡಾ.ಅನ್ನದಾನಿ ಎಂ. ಮೇಟಿ ಮತ್ತು ಗೌರವ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ ತಿಳಿಸಿದ್ದಾರೆ.
ರಾಜ್ಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜು.1ರಂದು ನೀಡಲಾಗುವುದು. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಒಂದೇ ಸಂಘಟನೆಯಿಂದ ಒಂದೇ ವ್ಯಕ್ತಿಯನ್ನು ಒಂದೇ ಗೌರವಕ್ಕೆ ಆಯ್ಕೆ ಮಾಡಿದ ಅಪರೂಪದ ಸಂದರ್ಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಾ.ಸಂತೋಷ್ ಸೋನ್ಸ್ ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರು ಮೂರು ದಶಕಗಳಿಂದ ಐಎಪಿಯಲ್ಲಿ ಸಕ್ರಿಯರಾಗಿದ್ದಾರೆ. ರಾಷ್ಟ್ರೀಯ ಉಪಾಧ್ಯಕ್ಷ (2010), ರಾಷ್ಟ್ರೀಯ ಅಧ್ಯಕ್ಷರು - ತೀವ್ರ ನಿಗಾ ವಿಭಾಗ (2013) ಮತ್ತು ಐಎಪಿ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ (2015) ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಅವರಿಗೆ ಏಷ್ಯಾ ಪೆಸಿಫಿಕ್ ಪೀಡಿಯಾಟ್ರಿಕ್ ಅಸೋಸಿಯೇಷನ್ ‘ಅತ್ಯುತ್ತಮ ಏಷ್ಯನ್ ಪೀಡಿಯಾಟ್ರಿಶಿಯನ್ ಅವಾರ್ಡ್ 2018’ ನೀಡಿ ಗೌರವಿಸಿತು.
ಈ ಪ್ರದೇಶದ ಮಕ್ಕಳ ತೀವ್ರ ನಿಗಾ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಡಾ.ಸೋನ್ಸ್ ಓರ್ವ ಅನುಭವಿ ವೈದ್ಯಕೀಯ ಶಿಕ್ಷಣ ತಜ್ಞ ಮತ್ತು ಮಕ್ಕಳ ವೈದ್ಯರಾಗಿದ್ದಾರೆ. ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಿಗೆ ಹೆಚ್ಚು ಬೇಡಿಕೆಯಿರುವ ಭಾಷಣಕಾರರಾಗಿದ್ದಾರೆ.
ಡಾ.ಸೋನ್ಸ್ ಎರಡು ಪುಸ್ತಕಗಳನ್ನು ರಚಿಸಿದ್ದಾರೆ. ಹಲವಾರು ವೈದ್ಯಕೀಯ ಪಠ್ಯ ಪುಸ್ತಕಗಳಿಗೆ ಅಧ್ಯಾಯಗಳನ್ನು ನೀಡಿದ್ದಾರೆ. ಜತೆಗೆ, ವಿವಿಧ ವೈದ್ಯಕೀಯ ನಿಯತಕಾಲಿಕಗಳಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ಮಕ್ಕಳ ತೀವ್ರ ನಿಗಾ ಚಿಕಿತ್ಸೆಯಲ್ಲಿ ಅವರ ಮುಂಚೂಣಿ ಕಾರ್ಯವನ್ನು ಗುರುತಿಸಿದ ಐಎಪಿ ತೀವ್ರ ನಿಗಾ ಅಧ್ಯಾಯದ ರಾಜ್ಯ ಘಟಕ ಡಾ.ಸೋನ್ಸ್ ಅವರ ಗೌರವಾರ್ಥ ಒಂದು ವಾರ್ಷಿಕ ಪ್ರವಚನವನ್ನು ಸ್ಥಾಪಿಸಿದೆ.
ಕುಂದಾಪುರ ಮೂಲದ ಡಾ.ಸಂತೋಷ್ ಸೋನ್ಸ್, ಮಂಗಳೂರು ಮತ್ತು ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ. ಡಾ.ಸೋನ್ಸ್ ಪ್ರಸ್ತುತ ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಶಿಶು ವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿ ಮತ್ತು ಎನ್‌ಐಸಿಯು/ ಪಿಐಸಿಯು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರೀಯ ಐಎಂಎ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ಖುಷಿ ತಂದಿದೆ. ನಾನು, ನನ್ನ ವೃತ್ತಿಯಲ್ಲಿ ಮತ್ತಷ್ಟು ಶ್ರಮ ವಹಿಸಲಿದ್ದೇನೆ. ನನ್ನ ಎಲ್ಲ ಪ್ರಯತ್ನಗಳಲ್ಲಿ ನನ್ನನ್ನು ಪ್ರೋತ್ಸಾಹಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.
ಡಾ.ಸಂತೋಷ್ ಸೋನ್ಸ್







