ಗೋಕಳವು ನಿಲ್ಲಿಸಲು ಸಮಗ್ರ ಕಾರ್ಯಾಚರಣೆಗೆ ಬಿಜೆಪಿ ಆಗ್ರಹ

ಮಂಗಳೂರು, ಜೂ.29: ಗೋ ಕಳವು ನಿಲ್ಲಿಸಲು ಹಾಗೂ ಅಕ್ರಮ ಕಸಾಯಿಖಾನೆ ಸ್ಥಗಿತಗೊಳಿಸಲು ದ.ಕ. ಜಿಲ್ಲೆಯಲ್ಲಿ ಸಮಗ್ರ ಕಾರ್ಯಾಚರಣೆ ನಡೆಸುವಂತೆ ಬಿಜೆಪಿ ಸಂಸದರು ಹಾಗೂ ಪಕ್ಷದ ನಿಯೋಗವು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಆಗ್ರಹಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಂದು ತಿಳಿಸಿದ್ದಾರೆ.
ನಗರದಲ್ಲಿನ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ, ಅಕ್ರಮ ಗೋ ಕಳ್ಳಸಾಗಾಟ ಹಾಗೂ ಗೋಕಳ್ಳತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಗೋ ಸಂಬಂಧಿ ಘಟನೆಗಳನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಯಕಟ್ಟಿನ ಜಾಗದಲ್ಲಿ ಸಿ.ಸಿ. ಕ್ಯಾಮರಾ ಹಾಗೂ ಬ್ಯಾರಿಕೇಡ್‌ಗಳನ್ನು ಹಾಕಿ ದಿನದ 24 ಗಂಟೆಯೂ ಕಟ್ಟುನಿಟ್ಟಾದ ಬಂದೋಬಸ್ತ್ ಕೈಗೊಳ್ಳಬೇಕು. ನಾಗರಿಕರನ್ನು ಒಳಗೊಂಡ ಕಣ್ಗಾವಲು ಸಮಿತಿಯನ್ನು ಪೊಲೀಸ್ ಇಲಾಖೆ ರಚಿಸಬೇಕು. ಗೋವಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿರುವ ಪ್ರಾಣಿ ಕ್ರೌರ್ಯ ತಡೆ ಮಂಡಳಿ (ಎಸ್‌ಪಿಸಿಎ)ನ್ನು ಸಕ್ರಿಯಗೊಳಿಸಬೇಕು ಎಂದು ಆಗ್ರಹಿಸಿದರು.
ಗೋ ಹಂತಕರಿಗೆ ಅನುಕೂಲಕರ ಸ್ಥಳದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಾನೂನುಬಾಹಿರ ಕುದ್ರೋಳಿ ಜಾನುವಾರು ವಧಾಗೃಹವನ್ನು ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಗೋವು ಕಳ್ಳತನವಾದ ಮನೆಯವರಿಗೆ ಗೋವಿನ ಕ್ರಯ ಹಾಗೂ ಅದರಿಂದಾಗುತ್ತಿದ್ದ ಉತ್ಪಾದನೆಯ ಕೊರತೆ ಭರಿಸಲು ಕಳೆದು ಹೋದ ಗೋವಿನ ತಳಿಗನುಗುಣವಾಗಿ 50 ಸಾವಿರದಿಂದ 1 ಲಕ್ಷ ರೂ.ವರೆಗೆ ತಕ್ಷಣ ಜಿಲ್ಲಾಡಳಿತ ಪರಿಹಾರ ಕೊಟ್ಟು ಅವರು ಮುಂದೆಯೂ ಗೋವನ್ನು ಸಾಕುವಂತೆ ಧೈರ್ಯ ಬರಲು ರಕ್ಷಣೆ ನೀಡಬೇಕು ಎಂದು ಹೇಳಿದರು.
ಅಂತಾರಾಜ್ಯ ಗೋ ಸಾಗಾಟ ನಿಯಂತ್ರಿಸಿ: ಸಮೀಪದ ಕೇರಳ ರಾಜ್ಯದಲ್ಲೂ ಗೋಹತ್ಯಾ ನಿಷೇಧ ಕಾನೂನು ಹೊರತುಪಡಿಸಿ ಗೋ ಸಾಗಾಟದ ಎಲ್ಲ ನಿಯಮಾವಳಿಗಳೂ, ಪ್ರಾಣಿ ಕ್ರೌರ್ಯ ತಡೆ ಕಾಯ್ದೆಯ ಕಸಾಯಿಖಾನೆ ನಿಯಮಾವಳಿಗಳೆಲ್ಲವೂ ಜಾರಿಯಲ್ಲಿವೆ. ಕೇರಳಕ್ಕೆ ಹೋಗುವ ಎಲ್ಲ ಗಡಿಗಳಲ್ಲಿ ವಿಶೇಷ ಚೆಕ್ ಪೋಸ್ಟ್ (ಸಿ.ಸಿ. ಕ್ಯಾಮರಾ ಸಹಿತ) ಸ್ಥಾಪಿಸಿ ಗೋ ಸಾಗಾಟದ ಎಲ್ಲ ಕಾಯ್ದೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ ಎಂದರು.
ಜೋಕಟ್ಟೆ ಗೋವು ಪುನರ್ ವಶಪಡಿಸಿ: ಲಭ್ಯ ಮಾಹಿತಿಯಂತೆ ಜೋಕಟ್ಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸುಳ್ಳು ದಾಖಲೆ ಕೊಟ್ಟು ದಾರಿ ತಪ್ಪಿಸಿ ವಶಪಡಿಸಿದ ಗೋವುಗಳನ್ನು ಬಿಡುಗಡೆ ಮಾಡಲಾಗಿದೆ. ಈ ರೀತಿ ಸುಳ್ಳು ದಾಖಲೆಗಳನ್ನು ಕೊಡಲು ಯಾರ್ಯಾರು ಸಹಕರಿಸಿದ್ದಾರೆ ಎಂದು ಸಮಗ್ರ ತನಿಖೆ ನಡೆಸಿ ಸತ್ಯ ಸಂಗತಿಯನ್ನು ನ್ಯಾಯಾಲಯಕ್ಕೆ ತಿಳಿಸಿ ಬಿಡುಗಡೆಗೊಳಿಸಿದ ಗೋವುಗಳನ್ನು ಮತ್ತೆ ವಶ ಪಡೆದು ರಕ್ಷಿಸಬೇಕು. ಸುಳ್ಳು ದಾಖಲೆ ಕೊಟ್ಟವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ನಿಯೋಗದಿಂದ ಮನವಿ
ಗೋ ಕಳವು ನಿಲ್ಲಿಸಲು ದ.ಕ. ಜಿಲ್ಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಬಿಜೆಪಿ ಸಂಸದರು ಹಾಗೂ ಪಕ್ಷದ ನಿಯೋಗ ಶನಿವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ, ಡಾ.ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಕಿಶೋರ್ ರೈ, ಉದಯ ಕುಮಾರ್ ಶೆಟ್ಟಿ, ವಿನಯ ಎಲ್.ಶೆಟ್ಟಿ, ದಿನೇಶ್ ಪಾಂಡೇಶ್ವರ, ರಾಜೇಶ್ ಶೆಟ್ಟಿ ಮತ್ತು ಪುಷ್ಪರಾಜ್ ಆಳ್ವ ಜೊತೆಗಿದ್ದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮತ್ತು ಜಿಲ್ಲಾ ಎಸ್ಪಿಲಕ್ಷ್ಮೀಪ್ರಸಾದ್ ಇದ್ದರು.
ಪ್ರಾಣಿ ಸಾಗಾಟಕ್ಕೆ ವಿಶೇಷ ಪರವಾನಿಗೆ
ದೇಶಾದ್ಯಂತ ಗೋವುಗಳ ಸಹಿತ ಎಲ್ಲ ಪ್ರಾಣಿಗಳ ಹಿಂಸಾತ್ಮಕ ಸಾಗಾಟವನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಪ್ರಾಣಿ ಸಾಗಾಟ ವಾಹನದ ಬದಲಾವಣೆಗಾಗಿ ಮೋಟಾರು ವಾಹನ ಕಾಯ್ದೆ ನಿಯಮಾವಳಿ ತಂದಿದೆ. ಅದರ ಪ್ರಕಾರ ಪ್ರತಿ ಪ್ರಾಣಿಗೂ ಸಾಗಾಟಕ್ಕೆ ಸ್ಥಳ ನಿಗದಿಪಡಿಸಿದ್ದು, ಆ ಸ್ಥಳಕ್ಕನುಗುಣವಾಗಿ ಪಾರ್ಟಿಷನ್ ಮಾಡಿದ ವಾಹನಕ್ಕೆ ಆರ್‌ಟಿಒ ಪ್ರಾಣಿ ಸಾಗಾಟಕ್ಕೆ ವಿಶೇಷ ಅನುಮತಿ ಪಡೆಯಬೇಕು. ಹಾಗೆ ಅನುಮತಿ ಪಡೆದ ವಾಹನಗಳಲ್ಲಿ ಮಾತ್ರ ಪ್ರಾಣಿಗಳನ್ನು ಸಾಗಾಟ ಮಾಡಬೇಕು. ಆದರೆ ರಾಜ್ಯ ಸರಕಾರ ಈ ನಿಯಮಾವಳಿಗಳನ್ನು ನಿರ್ಲಕ್ಷ್ಯ ಮಾಡಿದೆ. ಇದನ್ನು ಇನ್ನೂ ಕಾರ್ಯರೂಪಕ್ಕೆ ತರದೇ ಇದ್ದ ಕಾರಣ ಇವತ್ತು ಅವ್ಯಾಹತವಾಗಿ ಗೋವು ಸಹಿತ ಇನ್ನಿತರ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.








