ರಂಗಚಟುವಟಿಕೆ ಸಾಮಾಜಿಕ ಉನ್ನತಿಯ ಪ್ರತೀಕ: ಡಾ.ಎಂ.ಜಿ.ವಿಜಯ್

ಉಡುಪಿ, ಜೂ.29: ಯುವ ಮನಸ್ಸುಗಳ ವಿವೇಚನಾ ಸಾಮರ್ಥ್ಯಕ್ಕೆ ಪೂರಕ ವಾದ ಸಂಪನ್ಮೂಲ ಶಿಬಿರಗಳಿಂದ ದೊರೆಯುತ್ತದೆ. ಅಂಕಗಳ ಜೊತೆಗೆ ಅನುಭವವೂ ಅತಿ ಮುಖ್ಯ. ನಾಟಕ ಆಧುನಿಕ ತಲ್ಲಣಗಳನ್ನು ಮೀರಿ ಬದುಕುವ ಚೈತನ್ಯ ಮತ್ತು ಮೌಲ್ಯಾತ್ಮಕ ಸಂದೇಶ ನೀಡುತ್ತದೆ. ರಂಗಚಟುವಟಿಕೆಗಳು ಸಾಮಾಜಿಕ ಉನ್ನತಿಯ ಪ್ರತೀಕವಾಗಿದೆಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಗುರುವಾರ ನಡೆದ ಸುಮನಸಾ ಕೊಡವೂರು ಸಂಸ್ಥೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗ ದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ 27ದಿನಗಳ ರಂಗ ತರಬೇತಿ ಶಿಬಿರ ‘ಅಂತರಂಗ’ದ ಸಮಾರೋಪ ಸಮಾರಂದಲ್ಲಿ ಅವರು ಮಾತನಾಡುತಿದ್ದರು.
ವೇದಿಕೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ ಮಾರ್ಟಿಸ್, ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯಾದವ ಕರ್ಕೇರ, ರಂಗ ನಿರ್ದೇಶಕ ವಿದ್ದು ಉಚ್ಚಿಲ್, ಸುಮನಸಾ ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ವಹಿಸಿ ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾರ್ಯದರ್ಶಿ ಅಕ್ಷತ್ ಅಮೀನ್ ವಂದಿಸಿದರು. ದಯಾನಂ ಯು. ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಹಾಗೂ ಬಳಿಕ ಶಿಬಿರಾರ್ಥಿಗಳಿಂದ ಟ್ರೈನ್ ಟು ಪಾಕಿಸ್ತಾನ್ ಕಾದಂಬರಿ ಆಧಾರಿತ ಚಿಂದಾನಂದ ಸಾಲಿ ರಚನೆಯ ವಿದ್ದು ಉಚ್ಚಿಲ್ ನಿರ್ದೇಶನದ ‘ಕರುಳ ತೆಪ್ಪದ ಮೇಲೆ’ ನಾಟಕ ಪ್ರದರ್ಶನಗೊಂಡಿತು.







