ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯನ್ನು ವಿಳಂಬಿಸುವುದು ಸರಿಯಲ್ಲ: ನ್ಯಾಶನಲ್ ಕಾನ್ಫರೆನ್ಸ್

ಶ್ರೀಗರ,ಜೂ.29: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಕುರಿತು ಕೇಳಿದ ಪ್ರಶ್ನೆಗೆ ಗೃಹ ಸಚಿವ ಅಮಿತ್ ಶಾ ನೀಡಿರುವ ಉತ್ತರದ ಬಗ್ಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಶನಲ್ ಕಾನ್ಫರೆನ್ಸ್ , ರಾಜ್ಯದಲ್ಲಿ ಚುನಾವಣೆಯನ್ನು ಅತಿಯಾಗಿ ವಿಳಂಬ ಮಾಡುತ್ತಿರುವುದರಿಂದ ದೇಶದ ಒಕ್ಕೂಟ ವ್ಯವಸ್ಥೆಯ ಜೊತೆ ಚೆಲ್ಲಾಟವಾಡುವುದಕ್ಕೆ ಸಮ ಎಂದು ಕಿಡಿಕಾರಿದೆ.
ರಾಜ್ಯದ ಗುರುತು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಬಲ್ಲ ಸ್ಥಿರ ಸರಕಾರಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಎದುರು ನೋಡುತ್ತಿದ್ದಾರೆ ಎಂದು ಎನ್‌ಸಿ ತಿಳಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕೇಂದ್ರದಲ್ಲೇ ಕುಳಿತು ರಾಜ್ಯದಲ್ಲಿ ಆಡಳಿತ ನಡೆಸಲು ಬಯಸುತ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ವಿನಾಶಕಾರಿಯಾಗಲಿದೆ ಎಂದು ಎನ್‌ಸಿಯ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಮೂಲದಿಂದಲೇ ಬಲಪಡಿಸುವ ಅಗತ್ಯವಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಆದರೆ ವಿಧಾನ ಸಭಾ ಚುನಾವಣೆಯನ್ನು ವಿಳಂಬ ಮಾಡುವುದರಿಂದ ಈ ಕನಸನ್ನು ಹೇಗೆ ಸಾಕಾರ ಮಾಡುವುದು? ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯಕ್ಕೆ ಚುನಾಯಿತ ಪ್ರತಿನಿಧಿಯನ್ನು ನೇಮಕ ಮಾಡುವಲ್ಲಿ ಇನ್ನಷ್ಟು ವಿಳಂಬವಾದರೆ ಸರಕಾರ ಮತ್ತು ಜನರ ಮಧ್ಯೆಯ ಅಂತರವೂ ಹೆಚ್ಚಾಗಲಿದೆ ಎಂದು ಸಾಗರ್ ತಿಳಿಸಿದ್ದಾರೆ.





