ಒಬಿಸಿ ಮೀಸಲಾತಿ ಕಡಿತಗೊಳಿಸಿದರೆ ಉಗ್ರ ಹೋರಾಟ: ಹಿಂಜಾಒ ಎಚ್ಚರಿಕೆ
ಬೆಂಗಳೂರು, ಜೂ.29: ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ಒಂದು ವೇಳೆ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಕಡಿತಗೊಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಎಚ್ಚರಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7.5ರಷ್ಟು ಹೆಚ್ಚಿಸಬೇಕೆಂದು ನೀಡಿರುವ ಮನವಿ ನ್ಯಾಯಯುತವಾಗಿದೆ. ಆದರೆ ಹಿಂದುಳಿದ ವರ್ಗಗಳಿಗೆ ಹಾಲಿ ಚಾಲ್ತಿಯಲ್ಲಿರುವ ಮೀಸಲಾತಿ ಪ್ರವರ್ಗ-1 ಮತ್ತು 2ಎ ನಲ್ಲಿ ಜಾರಿಯಲ್ಲಿರುವ ಶೇ.4ರಷ್ಟು ಪ್ರವರ್ಗ-1 ಶೇ.15ರಷ್ಟು ಪ್ರವರ್ಗ 2ಎ ಗಳಲ್ಲಿ ಯಾವುದೇ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಹೇಳಿದರು.
ಈಗಾಗಲೇ ಪ್ರವರ್ಗ-1ರಲ್ಲಿ 98 ಜಾತಿಗಳಿದ್ದು, ಪ್ರವರ್ಗ-2ರಲ್ಲಿ 102 ಜಾತಿಗಳಿಗೆ ಈಗ ನೀಡುತ್ತಿರುವ ಮೀಸಲಾತಿ ಜನಸಂಖ್ಯೆ ಅನುಗುಣವಾಗಿ ಸಮರ್ಪಕವಾಗಿಲ್ಲ. ಹಾಗಾಗಿ ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪ್ರವರ್ಗ-1ರಲ್ಲಿ ಆಗಲಿ ಪ್ರವರ್ಗ-2ಎ ರಲ್ಲಿ ಆಗಲಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬಾರದು. ಶೇ.50ರಷ್ಟು ಮೀಸಲಾತಿಯನ್ನು ಶೇ.70ಕ್ಕೆ ಹೆಚ್ಚಿಸಿ ಓಬಿಸಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಒಂದು ವೇಳೆ ಸರಕಾರ ಮೀಸಲಾತಿ ಕಡಿತಗೊಳಿಸಲು ಹೊರಟರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.







