ಉಚಿತ ಸ್ತನ ಕ್ಯಾನ್ಸರ್ ಪರೀಕ್ಷೆಗೆ ‘ಪಿಂಕ್ ಎಕ್ಸ್‌ಪ್ರೆಸ್’
ಬೆಂಗಳೂರು, ಜೂ. 29: ಮಹಿಳೆಯರಲ್ಲಿನ ಸ್ತನ ಕ್ಯಾನ್ಸರ್ ಉಚಿತ ತಪಾಸಣೆಗೆ ‘ರೋಟರಿ ಬೆಂಗಳೂರು’ ಅತ್ಯಾಧುನಿಕ ಉಪಕರಣಗಳುಳ್ಳ ಪಿಂಕ್ ಎಕ್ಸ್‌ಪ್ರೆಸ್ ಮೊಬೈಲ್ ವಾಹನವನ್ನು ರೋಟರಿ ಅಧ್ಯಕ್ಷ ರಿತೇಶ್ ಗೋಯಲ್ ಇಂದಿಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ, ಪರಿಸರ ಮತ್ತು ವೃತ್ತಿಪರ ಕ್ಷೇತ್ರಗಳನ್ನು ಒಳಗೊಂಡ ಅನೇಕ ಸಮುದಾಯ ಸೇವಾ ಆಧಾರಿತ ಕಾರ್ಯಗಳಲ್ಲಿ ರೋಟರಿ ತೊಡಗಿಕೊಂಡಿದೆ. ಇಂದು ರೋಟರಿ ಸಂಸ್ಥೆ ಮಹಿಳೆಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ವಾಹನವನ್ನು ಉದ್ಘಾಟಿಸಲಾಗಿದೆ ಎಂದರು.
ಪಿಂಕ್ ಎಕ್ಸ್‌ಪ್ರೆಸ್‌ನಲ್ಲಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸ್ಕ್ರೀನಿಂಗ್ ಥರ್ಮಲ್ ಇಮೇಜಿಂಗ್‌ನ್ನು ನಾವು ಆಧರಿಸಿದ್ದೇವೆ. ಇದು ಸ್ಪರ್ಶ ರಹಿತ, ನೋವು ರಹಿತ ವಿನೂತನ ಪ್ರಕ್ರಿಯೆಯಾಗಿದೆ. ಹೆಚ್ಚಿನ ಮಹಿಳೆಯರು ಈ ಪರೀಕ್ಷೆಗೆ ಒಳಗಾಗಲು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶ ನಮ್ಮದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ನಿರ್ದೇಶಕ ಸುಮಿತ್ರೋ ಘೋಷ್, ಸಕ್ರ ವರ್ಲ್ಡ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ತಕಾಶಿ ಮಾಕಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.







