ಆ.9: ಮಾನವೀಯತೆಗಾಗಿ ವೈಚಾರಿಕತೆಯ ರಾಷ್ಟ್ರೀಯ ಸಮಾವೇಶ
ಬೆಂಗಳೂರು, ಜೂ.29: ಮಹಾರಾಷ್ಟ್ರ ಅಂಥಶ್ರದ್ಧ ನಿರ್ಮೂಲನಾ ಸಮಿತಿಯ ವತಿಯಿಂದ ಆ.9ರಂದು ಮುಂಬೈನಲ್ಲಿ ‘ಮಾನವೀಯತೆಗಾಗಿ ವೈಚಾರಿಕತೆಯ’ ಬಗ್ಗೆ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಡಾ.ಸುದೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಮಹಾರಾಷ್ಟ್ರ ರಾಜ್ಯದಲ್ಲಿ ಸುಮಾರು 3 ದಶಕಗಳಿಂದ ಎಲ್ಲ ರೀತಿಯ ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವಯಂಪ್ರೇರಿತ ಸಂಘಟನೆಯಾಗಿದ್ದು, ವೈಜ್ಞಾನಿಕ ಪ್ರಜ್ಞೆಯನ್ನು ಹರಡುವ ಕೆಲಸದಲ್ಲಿ ನಿರತವಾಗಿದೆ. ಅಮಾನವೀಯ ಅಭ್ಯಾಸಗಳು, ಸಾಮಾಜಿಕ ಬಹಿಷ್ಕಾರ ವಿಧಿ-ವಿಧಾನಗಳು, ಆಚರಣೆಗಳು ಮುಂತಾದ ಅನಿಷ್ಟ ಪದ್ದತಿಯನ್ನು ವಿರೋಧಿಸುತ್ತಾ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸಮಾವೇಶಕ್ಕೆ ದೇಶದ್ಯಾಂತ ವಿವಿಧ ರಾಜ್ಯಗಳಿಂದ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆ.10 ಮತ್ತು 11ರಂದು ಸಮಿತಿಯ ವತಿಯಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ಬಗ್ಗೆ ಅಧಿವೇಶನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.





