ಬಾಬಾ ಬುಡನ್‍ಗಿರಿಗೆ ಭೇಟಿ ನೀಡದೇ ವರದಿ ನೀಡಿದ್ದೇನೆಂಬ ವಾದ ಸುಳ್ಳು: ಎಚ್.ಎನ್.ನಾಗಮೋಹನ್‍ದಾಸ್

ಚಿಕ್ಕಮಗಳೂರು, ಜೂ.29: ಬಾಬಾಬುಡನ್‍ಗಿರಿ ವಿವಾದ ಸಂಬಂದ ಹಿಂದಿನ ರಾಜ್ಯ ಸರಕಾರಕ್ಕೆ ವರದಿ ನೀಡಲು ನನ್ನ ನೇತೃತ್ವದ ಸಮಿತಿ ರಚಿಸಿತ್ತು. ಈ ಸಮಿತಿಯಲ್ಲಿ ಇನ್ನೂ ಮೂವರು ತಜ್ಞ ಸದಸ್ಯರಿದ್ದರು. ಈ ಸಮಿತಿ ನೀಡಿದ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ವರದಿಯನ್ನು ಸರಕಾರ ಮಾನ್ಯ ಮಾಡಿದೆ. ಆದರೆ ವರದಿ ಬಗ್ಗೆ ಟೀಕೆಗಳು ಬಂದಿದ್ದು, ಬಾಬಾಬುಡನ್‍ಗಿರಿಗೆ ಭೇಟಿ ನೀಡದೇ ವರದಿ ಸಿದ್ಧಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನಾಯಾಧೀಶ ಎಚ್.ಎನ್.ನಾಗಮೋಹನ್‍ದಾಸ್ ಸ್ಪಷ್ಟನೆ ನೀಡಿದ್ದಾರೆ.
ಸಂವಿಧಾನ ಓದು ಅಭಿಯಾನದ ಅಂಗವಾಗಿ ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿರುವ ಅವರನ್ನು ಶನಿವಾರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಕಾಲೇಜು ದಿನಗಳಲ್ಲೇ ಬಾಬಾಬುಡನ್‍ಗಿರಿಗೆ ಭೇಟಿ ನೀಡಿದ್ದೆ. ನಂತರ ಸ್ನೇಹಿತರು, ಕುಟುಂಬಸ್ಥರೊಂದಿಗೆ ಭೇಟಿ ನೀಡಿದ್ದೇನೆ. ಈ ವೇಳೆಯಲ್ಲಿ ನಾನು ಬಾಬಾ ಬುಡನಗಿರಯ ಇತಿಹಾಸ ತಿಳಿದುಕೊಂಡಿದ್ದೆ ಎಂದರು.
ಸರಕಾರ ಗಿರಿಯ ವಿವಾದ ಸಂಬಂಧ ವರದಿ ಸಲ್ಲಿಸಲು ಸಮಿತಿ ರಚನೆ ಮಾಡಿದ ಸಂದರ್ಭದಲ್ಲಿ ತನ್ನೊಂದಿಗಿದ್ದ ಮೂವರು ಸದಸ್ಯರು ರಾಜ್ಯದ ಪ್ರಮುಖ ಚಿಂತಕರು, ಆಳವಾದ ಇತಿಹಾಸ ಜ್ಞಾನ ಹೊಂದಿರುವವರು, ಅಧ್ಯಯನ ಶೀಲರು ಹಾಗೂ ಕಳಂಕ ರಹಿತರೂ ಆಗಿದ್ದರು. ಸಮಿತಿ ಸದಸ್ಯರಿಗೆ ಪ್ರತ್ಯೇಕವಾಗಿ ಬರವಣಿಗೆ ಹಾಗೂ ಮೌಖಿಕ ಅಭಿಪ್ರಾಯ ತಿಳಿಸಲು ಕೋರಲಾಗಿತ್ತು. ಎಲ್ಲರು ಸೂಕ್ತ ದಾಖಲೆಗಳನ್ನು ಅಧ್ಯಯನ ಮಾಡಿ ಅತ್ಯುತ್ತಮ ವರದಿಯನ್ನು ನೀಡಿದ್ದೇವೆ. ಸರಕಾರ ಈ ವರದಿಯನ್ನು ಒಪ್ಪಿತ್ತು ಎಂದರು.
ತಾನು ತನ್ನ ನೇತೃತ್ವದ ಸಮಿತಿಯು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ವರದಿ ವಿರುದ್ಧ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಾರೆ. ನ್ಯಾಯಾಲಯ ಈ ವರದಿ ಸಂಬಂಧ ತೀರ್ಪು ನೀಡಬೇಕಿರುವುದರಿಂದ ಇದಕ್ಕಿಂತ ಹೆಚ್ಚಿಗೆ ಮಾತನಾಡಲು ಸಾಧ್ಯವಿಲ್ಲ. ತನ್ನ ಸಮಿತಿ ನೀಡಿದ ವರದಿ ಸಂಬಂಧ ನ್ಯಾಯಾಲಯ ನೀಡುವ ಯಾವುದೇ ತೀರ್ಪಿಗೆ ತಾನು ಬದ್ಧನಾಗಿರುತ್ತೇನೆ ಎಂದು ನಾಗಮೋಹನ್‍ದಾಸ್ ತಿಳಿಸಿದರು.







