ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ, ಐದು ವರ್ಷ ಕುಮಾರಸ್ವಾಮಿಯೇ ಸಿಎಂ: ಸಚಿವ ಎಚ್.ಡಿ.ರೇವಣ್ಣ

ಮೈಸೂರು, ಜೂ.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ, ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ದಸರಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 'ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಹೇಳಿಕೊಂಡು ತಿರುಗುತ್ತಿದ್ದಾರೆ. ಒಂದು ವರ್ಷವಾದರೂ ಅದು ಸಾಧ್ಯವಾಗಲಿಲ್ಲ, ದೇವೇಗೌಡರ ಹೆಸರನ್ನು ಹೇಳದಿದ್ದರೆ ನಿದ್ರೆಯೇ ಬರುವುದಿಲ್ಲ, ಹಗಲು ರಾತ್ರಿ ದೇವೇಗೌಡರನ್ನೇ ಜಪ ಮಾಡುತ್ತಿರುತ್ತಾರೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಕುಮಾರಸ್ವಾಮಿ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದರು. ನಾಲೆಗಳಿಗೆ ನೀರು ಬಿಡುವುದು ನಮ್ಮ ಕೈಯಲ್ಲಿ ಇಲ್ಲ. ಮೊನ್ನೆ ತಮಿಳುನಾಡಿನ ಹಾಗೂ ಕೇಂದ್ರ ಜಲ ಮಂಡಳಿಯ ಸದಸ್ಯರೇ ಖುದ್ದಾಗಿ ಬಂದು ಡ್ಯಾಂನ ನೀರಿನ ಸ್ಥಿತಿಗಳ ಬಗೆ ಪರಿಶೀಲನೆ ಮಾಡಿಹೋಗಿದ್ದಾರೆ ಎಂದರು.
ಸೋತ ಮೇಲೆ ಮಂಡ್ಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಮಂಡ್ಯ ಬೇರೆ ಹಾಸನ ಬೇರೆ ಅಲ್ಲ, ಆ ಸಣ್ಣತನವೂ ನಮಗಿಲ್ಲ. ಚುನಾವಣೆಯೇ ಬೇರೆ, ಅಭಿವೃದ್ದಿಯೇ ಬೇರೆ. ಒಂದು ಸಾವಿರ ಕೋಟಿಯ ವಿವಿಧ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಅದರ ಬಗ್ಗೆ ಇಂದು ಸಹ ಸಭೆ ನಡೆಸಿ ಬಂದಿದ್ದೇನೆ. ಚುನಾವಣೆಗೂ ಮುನ್ನ 10 ದಿನ ನೀರು ಬಿಟ್ಟ ವಿಚಾರದಲ್ಲಿ ಟ್ರಿಬ್ಯುನ್ ನಿಂದ ನೋಟಿಸ್ ನೀಡಲಾಗಿದೆ. ಈಗ ತನಿಖೆಯನ್ನು ನಡೆಸುತ್ತಿದ್ದಾರೆ. ಒಂದು ಹನಿ ನೀರು ಬಿಟ್ಟರೂ ನೋಟಿಸ್ ಬರುತ್ತದೆ ಎಂದು ಹೇಳಿದರು.
ಸಂಸದರಾದ ಮೇಲೆ ಪ್ರಜ್ವಲ್ ರೇವಣ್ಣ ಲೋಕಸಭೆಯಲ್ಲಿ ಚೆನ್ನಾಗಿ ಮಾತನಾಡಿದ್ದಾರೆ. ರೈತರ ಬದುಕಿನಲ್ಲಿ ಯಾರೂ ಚೆಲ್ಲಾಟವಾಡಬಾರದು. 25 ಜನ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಗಿ ನೀಡು ಬಿಡಿಸಲಿ. ಸುಳ್ಳು ಹೇಳಿಕೊಂಡು ಹೆಚ್ಚುದಿನ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ದಿ ಕುರಿತು ಲೋಕೋಪಯೋಗಿ ಇಲಾಖೆಯಿಂದ ಆಗಬೇಕಿರುವ ಕೆಲಸಗಳ ಮಾಹಿತಿ ಪಡೆದು, ಕೂಡಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿ.ಪಂ.ಸಿಇಓ ಕೆ.ಜ್ಯೋತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







