ನಮ್ಮ ಕುಟುಂಬ ದ್ವೇಷ ರಾಜಕಾರಣ ಮಾಡುತ್ತಿಲ್ಲ: ಸಚಿವ ಎಚ್.ಡಿ.ರೇವಣ್ಣ

ಮಂಡ್ಯ, ಜೂ.29: ನಮ್ಮ ಕುಟುಂಬ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ದ್ವೇಷದ ರಾಜಕಾರಣ ಮಾಡುತ್ತಿಲ್ಲ, ಮಾಡುವುದೂ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ನಿಖಿಲ್ ಸೋಲಿನ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಕೆಆರ್‍ಎಸ್ ಜಲಾಶಯದಿಂದ ಬೆಳೆಗಳಿಗೆ ನೀರು ಬಿಡದೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ರೈತಸಂಘದ ಆರೋಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡಿದ್ದರೆ ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಕೆಲಸ ನಿಲ್ಲುತ್ತಿದ್ದವು. ಯಾರೋ ಮಾಡಿದ ಆರೋಪಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ನಾನು ರೋಡ್ ಮಂತ್ರಿ, ನೀರಿನ ಮಂತ್ರಿ ಅಲ್ಲ. ರೋಡ್ ಬಗ್ಗೆ ಕೇಳಿ, ಹೇಳುತ್ತೇನೆಂದು ಅವರು ಕೆಆರ್‍ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆಗೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಕಾವೇರಿ ವಿಚಾರವಾಗಿ ಪ್ರಜ್ವಲ್ ಸಂಸತ್‍ನಲ್ಲಿ ಧ್ವನಿ ಎತ್ತಿದ್ದಾನೆ. ನನಗೆ ಇಲ್ಲಿ ನೀರು ಎಷ್ಟಿದೆ ಎಂಬುದು ಗೊತ್ತಿಲ್ಲ. ಗೊತ್ತಿದ್ದರೆ ಮಾತನಾಡುವೆ. ಆದರೆ, ಹೇಮಾವತಿ ಡ್ಯಾಂ ಬಗ್ಗೆ ಗೊತ್ತು. ಅಲ್ಲಿ 15 ದಿನಗಳವರೆಗೆ ಕುಡಿಯುವ ನೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು ರೇವಣ್ಣ.
ತಮಿಳುನಾಡಿನ ಅಧಿಕಾರಿಗಳು ರಾಜ್ಯ ಸರಕಾರದ ಗಮನಕ್ಕೆ ತಾರದೇ ಎಲ್ಲಾ ಜಲಾಶಯಗಳ ನೀರಿನ ಮಟ್ಟ ತಿಳಿದುಕೊಂಡು ಹೋಗಿದ್ದಾರೆ. ಸಂಪೂರ್ಣ ಮಾಹಿತಿ ಅವರ ಬಳಿ ಇದೆ. ಕೆಆರ್‍ಎಸ್, ಹಾರಂಗಿ, ಹೇಮಾವತಿ, ಗೊರೂರು, ಯಗಚಿ ಸೇರಿದಂತೆ ಕಾವೇರಿ ಕೊಳ್ಳದ ಡ್ಯಾಂಗಳ ನೀರಿನ ಮಾಹಿತಿ ಸಂಗ್ರಹ ಮಾಡಿದ್ದಾರೆ ಎಂದು ಅವರು ಹೇಳಿದರು.
ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.







