ಕೂಡಲಸಂಗಮ ಐಕ್ಯ ಮಂಟಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಬಾಗಲಕೋಟೆ, ಜೂ. 30: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿನ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರವಿವಾರ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಐಕ್ಯ ಮಂಟಪಕ್ಕೆ ಭೇಟಿ ನೀಡಿದ್ದು, ಐಕ್ಯ ಮಂಟಪದಲ್ಲಿ ಗೋಡೆ-ಆಧಾರ ಸ್ಥಂಭಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಸಿದ್ದರಾಮಯ್ಯ ಪರಿಶೀಲಿಸಿ, ಮಂಟಪದ ದುರಸ್ತಿ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇದೀಗ ನಾನು ಸರಕಾರದಲ್ಲಿ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಅಷ್ಟೇ. ಎಲ್ಲವನ್ನು ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ. ನನ್ನ ಕ್ಷೇತ್ರದಲ್ಲಿ ಗುಳೇದಗುಡ್ಡ ತಾಲೂಕು ಘೋಷಣೆ ಆಗಿದೆ. ಆದರೆ ತಹಶೀಲ್ದಾರ್ ನೇಮಕ ಮಾಡಿದ್ದಾರಷ್ಟೇ. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲ ಎಂದರು.
ಜಿಲ್ಲೆಯ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವರಾದ ಉಮಾಶ್ರೀ, ಎಚ್.ವೈ.ಮೇಟಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳು ಈ ವೇಳೆ ಉಪಸ್ಥಿತರಿದ್ದರು.





