ದೆಹಲಿಯಲ್ಲಿ ಬಿಸಿಗಾಳಿ: ಬೇಸಿಗೆ ರಜೆ ವಿಸ್ತರಣೆ

ಹೊಸದಿಲ್ಲಿ: ಉಷ್ಣ ವಾತಾವರಣದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ 8ನೇ ತರಗತಿವರೆಗಿನ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆಯನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ. ಆದರೆ ಈ ಆದೇಶ 9ರಿಂದ 12ನೇ ತರಗತಿಗೆ ಅನ್ವಯಿಸುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆಯೇ ಈ ತರಗತಿಗಳು ಆರಂಭವಾಗಲಿವೆ.
"ದೆಹಲಿಯಲ್ಲಿ ಉಷ್ಣ ವಾತಾವರಣದ ಹಿನ್ನೆಲೆಯಲ್ಲಿ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ. ಇತರ ತರಗತಿಗಳಿಗೆ ನಿಗದಿತ ವೇಳಾಪಟ್ಟಿಯಂತೆ ಮುನ್ನವೇ ಆರಂಭವಾಗಲಿದೆ" ಎಂದು ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಹವಾಮಾನ ಇಲಾಖೆ ಅಧಿಕಾರಿಗಳ ಅಂದಾಜಿನಂತೆ ಇನ್ನೂ ಕೆಲ ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಬಿಸಿ ಗಾಳಿ ಮುಂದುವರಿಯಲಿದೆ.
ರಾಜಧಾನಿಯಲ್ಲಿ ಶನಿವಾರ ಸಾಮಾನ್ಯಮಟ್ಟಕ್ಕಿಂತ 5 ಡಿಗ್ರಿಯಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಷಿಯಸ್ ಇದ್ದು, ಇದು ಸಾಮಾನ್ಯ ಮಟ್ಟಕ್ಕಿಂತ 2 ಡಿಗ್ರಿಯಷ್ಟು ಅಧಿಕ. ಗರಿಷ್ಠ ಉಷ್ಣಾಂಶ 42.3 ಡಿಗ್ರಿಯನ್ನು ತಲುಪಿದೆ. ತೇವಾಂಶ ಶೇಕಡ 28 ಮತ್ತು 55ರ ನಡುವೆ ವ್ಯತ್ಯಯವಾಗುತ್ತಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.







