ಜುಲೈ 2 ರಂದು ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಮಾವೇಶ
ಬೆಂಗಳೂರು, ಜೂ. 30: ಸರಕಾರಿ ಕಾಮಗಾರಿಗಳಲ್ಲಿ 50 ಲಕ್ಷ ರೂ.ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ಕ್ಕೆ ಕಲ್ಪಿಸಿರುವ ಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ಜುಲೈ 2ರ ಬೆಳಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಹಿಸಲಿದ್ದಾರೆ. ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ಸಂಸದರಾದ ಚಂದ್ರಪ್ಪ, ಧ್ರುವನಾರಾಯಣ್, ರಾಜ್ಯ ಹಿಂ.ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಪಾಲ್ಗೊಳ್ಳಲಿದ್ದಾರೆ.
‘ಮಿಲ್ಲರ್ ಕಮಿಷನ್ ವರದಿ ಶತಮಾನೋತ್ಸವ’ ದಿನಾಚರಣೆಯನ್ನು ಇದೇ ವೇಳೆ ಆಚರಿಸಲಾಗುವುದು. ಅಲ್ಲದೆ, ಸರಕಾರಿ ಕಾಮಗಾರಿಗಳ ಟೆಂಡರ್‌ಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಲು ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯ್ದೆ’ ಜಾರಿಗೆ ತಂದು ಎರಡು ವರ್ಷಗಳಾಗಲಿದೆ ಎಂದು ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ತಿಳಿಸಿದ್ದಾರೆ.
ಸರಕಾರಿ ಕಾಮಗಾರಿಗಳಲ್ಲಿ 50 ಲಕ್ಷ ರೂ.ವರೆಗಿನ ಮಿತಿಯನ್ನು 1ಕೋಟಿ ರೂ.ಗೆ ಹೆಚ್ಚಳ ಮಾಡಬೇಕು. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೂ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಬೇಕು. ದೊಡ್ಡ-ದೊಡ್ಡ ಕಾಮಗಾರಿಗಳನ್ನು ಹೊರ ರಾಜ್ಯದವರಿಗೆ ನೀಡುವುದನ್ನು ನಿಲ್ಲಿಸಬೇಕು. ಎಲ್ಲ ಇಲಾಖೆಗಳಲ್ಲಿ ಟೆಂಡರ್‌ಗಳಲ್ಲಿ ಮೀಸಲಾತಿ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ರಾಜ್ಯದಲ್ಲಿ ಎಸ್ಸಿ-ಎಸ್ಟಿ ವರ್ಗದ 8 ಸಾವಿರಕ್ಕೂ ಅಧಿಕ ಮಂದಿ ಗುತ್ತಿಗೆದಾರರಿದ್ದು ಕೇವಲ 300 ಕೋಟಿ ರೂ.ಗಳಷ್ಟು ಸರಕಾರಿ ಕಾಮಗಾರಿಗಳ ಟೆಂಡರ್ ಸಿಗುತ್ತಿಲ್ಲ. ಪರಿಶಿಷ್ಟರಿಗೆ ಅನುಕೂಲಕಲ್ಪಿಸುವ ಉದ್ದೇಶದಿಂದ ಕಾಯ್ದೆ ಜಾರಿ ಮಾಡಿದ್ದರೂ ಅಧಿಕಾರಿಗಳು ಅನುಷ್ಟಾನ ಮಾಡುತ್ತಿಲ್ಲ. ಹೀಗಾಗಿ ಮೀಸಲಾತಿ ಕಾಯ್ದೆ ಕೇವಲ ಕಾಗದಕ್ಕೆ ಸೀಮಿತವಾಗಿದೆ’
-ಎನ್.ಮಹದೇವಸ್ವಾಮಿ, ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ







