ಕೋಡಿಕಲ್: ಔಷಧ ಗಿಡ ವಿತರಣೆ ಕಾರ್ಯಕ್ರಮ
ಮಂಗಳೂರು, ಜೂ.30: ನಗರದ ಕೋಡಿಕಲ್‌ನ ಭಾರತ್‌ಮಾತ ನಾಗರಿಕ ಪರಿಸರ ವೇದಿಕೆ ವತಿಯಿಂದ ಕೋಡಿಕಲ್‌ನ ಪರಿಸರದಲ್ಲಿ ಗಿಡನೆಡುವ ಮತ್ತು ವಾರ್ಡ್‌ನ ಮನೆ-ಮನೆಗಳಿಗೆ ಔಷಧ ಗಿಡ ವಿತರಿಸುವ ಹಾಗೂ ಮಳೆಕೊಯ್ಲಿನ ವಿಷಯದ ಕುರಿತು ಮಾಹಿತಿ, ಪ್ರಾತ್ಯಕ್ಷಕೆ ಕಾರ್ಯಕ್ರಮವು ರವಿವಾರ ಜರುಗಿತು.
ಈ ಸಂದರ್ಭ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ ಸಮತೋಲಿತ ಮಳೆಯಾದರೆ ಮಾತ್ರ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಹೆಚ್ಚಲು ಸಾಧ್ಯ. ಗಿಡ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಭೂಮಿಯ ಹಸುರನ್ನು ಹೆಚ್ಚಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.
ನಗರದಲ್ಲಿ ಒಳಚರಂಡಿಗಳ ಅಸಮರ್ಪಕ ವ್ಯವಸ್ಥೆಯಿಂದ ಬಾವಿಗಳು ಮಲಿನವಾಗುತ್ತಿದೆ. ಹಲವು ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಸರಿಪಡಿಸಲು ಪಾಲಿಕೆ ಮನಸ್ಸು ಮಾಡುತ್ತಲ್ಲ. ಇದರಿಂದ ಬೇಸಿಗೆಯಲ್ಲಿ ನೀರಿದ್ದರೂ, ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ಭರತ್ ಶೆಟ್ಟಿ ನುಡಿದರು.
ಕೋಡಿಕಲ್ ಶ್ರೀ ಮೂಕಾಂಬಿಕಾ, ಮಹಾಕಾಳಿ, ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಜಯ ಪಾತ್ರಿ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಗಿಡಗಳನ್ನು ನೆಟ್ಟರು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಇ.ಆರ್.ಕಲ್ಬಾವಿ ರಾಜೇಂದ್ರ ರಾವ್ ಮಳೆ ಕೊಯ್ಲಿನ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪತ್ರಾಂಕಿತ ವ್ಯವಸ್ಥಾಪಕಿ ಪೂರ್ಣಿಮಾ ರಾಜಗೋಪಾಲ ರೈ, ದೇರಳಕಟ್ಟೆ ಶ್ರೀ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಗಳೂರು ಉತ್ತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ, ಮಂಗಳೂರು ದಕ್ಷಿಣ ಮಂಡಲ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಉಮಾನಾಥ ಅಮೀನ್, ವಕೀಲ ಬಿ.ಆರ್.ಸದಾಶಿವ, ಶೈಲಜಾ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಕಾರ್ಯದರ್ಶಿ ಶೈಲಜಾ ಸತೀಶ್, ಕೋಡಿಕಲ್ ವಾರ್ಡ್ ಬಿಜೆಪಿ ಅಧ್ಯಕ್ಷ ಬಿ.ರಾಮದಾಸ್ ನಾಯಕ್, ಕಾರ್ಯಕ್ರಮ ಆಯೋಜಕ ನಾಟಿವೈದ್ಯ ಡಾ.ಎಂ.ಮುರಳಿ ಕುಮಾರ್ ಚಿಲಿಂಬಿ, ತಮಿಳು ಚರ್ಚ್ ಅಸೋಸಿಯೇಶನ್ ಅಧ್ಯಕ್ಷ ಜಾನ್‌ರಾಜ್ ಕೋಡಿಕಲ್, ಜಿಎಸ್‌ಬಿ ಅಧ್ಯಕ್ಷ ಗಣೇಶ್ ಕಾಮತ್, ಆದರ್ಶ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸುಂದರ್ ಮೊದಲಾದವರಿದ್ದರು.
ಲೋಕನಾಥ ಬಂಗೇರ ಸ್ವಾಗತಿಸಿದರು. ಪ್ರಿಯಾ ಹರೀಶ್ ನಿರೂಪಿಸಿದರು.







