ಮಂಗಳೂರು ಬೈಸಿಕಲ್ ಕ್ಲಬ್‌ನಿಂದ ಪರಿಸರ ದಿನಾಚರಣೆ

ಮಂಗಳೂರು, ಜೂ.30: ಮಂಗಳೂರು ಬೈಸಿಕಲ್ ಕ್ಲಬ್‌ನ ಎಂಟನೇ ವರ್ಷಾಚರಣೆ ಹಾಗೂ ವಿಶ್ವ ಪರಿಸರ ದಿನದ ಅಂಗವಾಗಿ ರವಿವಾರ ನಗರದ ವೆಲೆನ್ಸಿಯಾದ 85 ವರ್ಷ ಹಳೆಯ ಹೆಂಚಿನ ಬಂಗಲೆಯಾಗಿರುವ ‘ಚಿರಾಗ್’ ನಿವಾಸದ ವಿಶಾಲ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಸಮಾಜ ಸೇವಕಿ, ಕಲಾವಿದೆ ವಿಮಲಾ ರಾಮಚಂದ್ರರ ಸಮ್ಮುಖ ಅವರ ನಿವಾಸದಲ್ಲಿ ಮಾವು, ಸೀತಾಫಲ, ಸ್ಟಾರ್ ಫ್ರುಟ್, ಮಡಕೆ ಹಣ್ಣು ಮುಂತಾದ ಗಿಡಗಳನ್ನು ನೆಡಲಾಯಿತು. ಕ್ಲಬ್ ಹಿರಿಯ ಸದಸ್ಯರಾಗಿದ್ದು ಕೆಲ ತಿಂಗಳ ಹಿಂದೆ ಮೃತರಾದ ರಹೀಂ ಟೀಕೆ ಅವರೂ ಈ ಮನೆಯಲ್ಲಿ ಬಾಡಿಗೆಯಲ್ಲಿ ಕೆಲ ತಿಂಗಳ ಕಾಲ ವಾಸವಾಗಿದ್ದುದನ್ನು ಹಿರಿಯರಾದ ವಿಮಲಾ ಸ್ಮರಿಸಿಕೊಂಡರು. ಇದೇ ವೇಳೆ ರಹೀಂ ಅವರ ಪುತ್ರ ರಾಹಿಲ್ ಕಳುಹಿಸಿ ಕೊಟ್ಟ ರಹೀಂ ಅವರು ಬರೆದ ಬ್ಯಾರಿ ಭಾಷಾ ಪುಸ್ತಕ ‘ಮಲ್ಲಿಗೆ ಬಲ್ಲಿ’ ಕೃತಿಗಳನ್ನು ವಿಮಲಾ ಅವರು ಕ್ಲಬ್ ಪ್ರತಿನಿಧಿಗಳಿಗೆ ಮಲ್ಲಿಗೆ ಹೂವಿನೊಂದಿಗೆ ಹಸ್ತಾಂತರಿಸಿದರು.
ಕಿನ್ನಿಗೋಳಿ ತಪೋವನದ ರಾಧೇಶ್ ಹಾಗೂ ಕಲ್ಪನಾ ಭಟ್ ಗಿಡಗಳನ್ನು ಒದಗಿಸಿಕೊಟ್ಟರು. ಕ್ಲಬ್ ಉಪಾಧ್ಯಕ್ಷ ಶ್ರೀಕಾಂತರಾಜ, ಖಜಾಂಚಿ ಹರಿಪ್ರಸಾದ್ ಶೇವಿರೆ, ಕಾರ್ಯದರ್ಶಿ ಗಣೇಶ್ ನಾಯಕ್, ಸದಸ್ಯ ಮುಕೇಶ್ ರಾವ್, ವೇಣುವಿನೋದ್, ಸಹಸಮಿತಿ ಸದಸ್ಯರಾದ ಕೌಶಿಕ್, ಜೋಸೆಫ್ ಮುಂತಾದವರು ಪಾಲ್ಗೊಂಡಿದ್ದರು.





