ರಾಮಕೃಷ್ಣ ಮಿಷನ್‌ನಿಂದ 30ನೇ ವಾರದ ಸ್ವಚ್ಛತಾ ಶ್ರಮದಾನ

ಮಂಗಳೂರು, ಜೂ.30: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 30ನೇ ವಾರದ ಸ್ವಚ್ಛತಾ ಶ್ರಮದಾನವನ್ನು ಹಂಪನಕಟ್ಟೆಯ ಹಳೆಯ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ರಾಜಶೇಖರ್ ಪುರಾಣಿಕ್ ಹಾಗೂ ಜಯಪ್ರಕಾಶ ನಾಯಕ್ ಶ್ರಮದಾನಕ್ಕೆ ಚಾಲನೆ ನೀಡಿದರು.
ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದ ರಾಜಶೇಖರ್ ಪುರಾಣಿಕ್, ಸ್ವಚ್ಛತೆ ನಮ್ಮ ಉಸಿರಾಗಬೇಕು. ಸ್ವಚ್ಛ ಪರಿಸರ ಸ್ವಚ್ಛ ಗಾಳಿ ಮನುಷ್ಯನಿಗೆ ಅತ್ಯವಶ್ಯ. ಇಂದಿನ ದಿನಗಳಲ್ಲಿ ಎಲ್ಲವೂ ಕಲುಷಿತಗೊಂಡು ಮಾನವನ ಬದುಕು ದುಸ್ತರವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಆಮ್ಲಜನಕ ನಳಿಕೆಗಳನ್ನು ಬಳಸುವ ಪ್ರಮೇಯ ಬಂದೊದಗಬಹುದು. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿವಹಿಸಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭ ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಏಕಗಮ್ಯಾನಂದ ಶ್ರೀ, ಹರೀಶ್ ಆಚಾರ್, ಮೋಹನ್ ಕೊಟ್ಟಾರಿ, ಶ್ರೀಕಾಂತ್ ರಾವ್, ಅನಿರುದ್ಧ ನಾಯಕ್, ರಾಜೇಶ್ವರಿ, ಯಶೋಧರ ಚೌಟ್, ಶ್ರೀಕರ ಕಲ್ಲೂರಾಯ ಉಪಸ್ಥಿತರಿದ್ದರು.
ಸ್ವಚ್ಛತೆ: ಪ್ರಥಮದಲ್ಲಿ ನಾಲ್ಕು ತ್ಯಾಜ್ಯರಾಶಿ ತುಂಬಿದ್ದ ಸ್ಥಳಗಳನ್ನು ಗುರುತಿಸಲಾಯಿತು. ತದನಂತರ ಸ್ವಯಂಸೇವಕರು ನಾಲ್ಕು ತಂಡಗಳಾಗಿ ವಿಭಾಗಿಸಿಕೊಂಡು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಮೊದಲ ತಂಡದಲ್ಲಿ ಸೌರಜ್ ಮಂಗಳೂರು ನೇತೃತ್ವದಲ್ಲಿ ಬಸ್ ನಿಲ್ದಾಣದಲ್ಲಿದ್ದ ದೊಡ್ಡದಾದ ತ್ಯಾಜ್ಯ ರಾಶಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಮೆಹಬೂಬ್ ಖಾನ್ ಮುಂದಾಳತ್ವದ ಎರಡನೇ ತಂಡ ಕೆಎಸ್‌ರಾವ್ ರಸ್ತೆಯ ಮೂಲೆಯಲ್ಲಿದ್ದ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ತೆಗೆದು ಹಸನುಗೊಳಿಸಲಾಯಿತು.
ಸಂದೀಪ ಕೋಡಿಕಲ್, ಸತೀಶ್ ಕೆಂಕನಾಜೆ ಇನ್ನಿತರ ಕಾರ್ಯಕರ್ತರು ಆರೋಗ್ಯ ಇಲಾಖೆಯ ಉಪಕಚೇರಿಯ ಮುಂಭಾಗದಲ್ಲಿದ್ದ ತ್ಯಾಜ್ಯ ತೆಗೆದು ಟಿಪ್ಪರ್‌ಗೆ ತುಂಬಿಸಿದರು. ಸ್ವಚ್ಛ ಯಕ್ಕೂರ ತಂಡದ ಸದಸ್ಯರಾದ ಶುಭಕರ ಶೆಟ್ಟಿ, ಪ್ರಶಾಂತ ಯಕ್ಕೂರು ಹಾಗೂ ಉಳಿದ ಸದಸ್ಯರು ಬಸ್ ನಿಲ್ದಾಣದ ಒಳಭಾಗದಲ್ಲಿ ಬಿದ್ದಿದ್ದ ಕಸಕಡ್ಡಿ ಪ್ಲಾಸ್ಟಿಕ್, ಬಾಟಲ್, ಗಾಜುಗಳನ್ನು ತೆಗೆದು ಶ್ರಮದಾನ ಮಾಡಿದರು.
ಕೊನೆಗೆ ದಿಲ್‌ರಾಜ್ ಆಳ್ವ ಹಾಗೂ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಅಡ್ಡಾದಿಡ್ದಿಯಾಗಿ ನಿಲ್ಲಿಸಿದ್ದ ಹಳೆಯ ವಾಹನ ಹಾಗೂ ರಿಕ್ಷಾಗಳನ್ನು ತೆಗೆದು ಬದಿಗೆ ಹಾಕಿ ಹೆಚ್ಚಿನ ಪಾರ್ಕಿಂಗ್ ಅನುಕೂಲ ಮಾಡಿಕೊಟ್ಟರು. ಸ್ವಚ್ಛ ಮಾಡಿದ ಆಯ್ದ ಸ್ಥಳಗಳಲ್ಲಿ ಆಲಂಕಾರಿಕ ಹೂಗಿಡಗಳ ಕುಂಡಗಳನ್ನಿಡಲಾಯಿತು. ಇನ್ನುಮುಂದೆ ಈ ಸ್ಥಳದಲ್ಲಿ ಸ್ವಚ್ಛತಾ ಯೋಧರು ಹಗಲಿರುಳು ಕಾವಲು ಕಾಯಲಿದ್ದಾರೆ. ಕಸ ಹಾಕುವವರಿಗೆ ಜಾಗೃತಿ ಮೂಡಿಸಲಿದ್ದಾರೆ. ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಶ್ರಮದಾನದ ಉಸ್ತುವಾರಿ ವಹಿಸಿದ್ದರು.
ಕರಪತ್ರ ಹಂಚಿಕೆ: ಶ್ರೀಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಹಂಪನಕಟ್ಟೆ ಕೆಎಸ್‌ಆರ್ ರಾವ್ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ, ಸ್ವಚ್ಛತೆಯ ಕುರಿತು ಮಾಹಿತಿ ನೀಡಿ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ಕೋರಿದರು. ಜೊತೆಗೆ ‘ಸ್ವಚ್ಛ ಮಂಗಳೂರು ಕನಸಲ್ಲ’ ಎಂಬ ಮಾಹಿತಿ ಪತ್ರವನ್ನು ಹಂಚಿಕೆ ಮಾಡಿದರು.
ಪ್ರೊ.ಸತೀಶ್ ಭಟ್ ಹಾಗೂ ಕೋಡಂಗೆ ಬಾಲಕೃಷ್ಣ ನಾಕ್ ವಿದ್ಯಾರ್ಥಿನಿಯರನ್ನು ಮಾರ್ಗದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರವೀಣ ಶೆಟ್ಟಿ ಹಾಗೂ ಸ್ವಯಂ ಸೇವಕರು ಸಸಿಗಳನ್ನು ನೆಟ್ಟರು.







