ಪುತ್ತೂರು : ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ದಲಿತ ಸೇವಾ ಸಂಘಟನೆಗಳ ಪ್ರತಿಭಟನೆ
ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಪ್ರಕರಣ

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಠಾಣೆಯ ಎಸ್‍ಐ ಹಾಗೂ ಅಮಾನತು ಗೊಂಡಿರುವ ಮೂವರು ಪೊಲೀಸ್ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದ್ದು, ಜುಲೈ 2ರಂದು ಎಲ್ಲಾ ದಲಿತ ಸಂಘಟನೆಗಳ ವತಿಯಿಂದ ಸಂಪ್ಯ ಠಾಣೆಯ ಎದುರು ಬೃಹತ್ ಪ್ರತಿಭಟನೆ ನಡೆಸಲಾ ಗುವುದು ಎಂದು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅಪ್ರಾಪ್ತ ಬಾಲಕಿಗೆ ಸಂಪ್ಯ ಪೊಲೀಸರು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಕ್ಕಾಗಿ ಆಗ್ರಹಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಎದುರು ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅಪ್ರಾಪ್ತ ಬಾಲಕಿ ಮತ್ತು ಆಕೆಯ ಹೆತ್ತವರಿಗೆ ಅನ್ಯಾಯವಾಗಿದೆ. ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿರುವ, ಶೋಷಣೆಗೆ ಒಳಗಾಗಿರುವ ಆ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ಮನೆ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಳ್ಳಾಲ್‍ಬಾಗ್ ಮಾತನಾಡಿ, ಯಾರೋ ಒಬ್ಬರು ದೂರು ನೀಡಿದ್ದಾರೆಂದು ಅಪ್ರಾಪ್ತ ಬಾಲಕಿ ಹಾಗೂ ಆಕೆಯ ತಂದೆ ತಾಯಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಜಿಲ್ಲೆಯಲ್ಲಿ 5 ಲಕ್ಷದಷ್ಟು ದಲಿತರಿದ್ದು, ಎಲ್ಲಾ ದಲಿತ ಸಂಘಟನೆಗಳು ಒಟ್ಟು ಸೇರಿಕೊಂಡು ದಲಿತರ ಶಕ್ತಿ ಏನೆಂಬುವುದನ್ನು ನಾವು ಜು.2ರಂದು ಸಂಪ್ಯ ಠಾಣೆಯ ಮುಂದೆ ತೋರಿಸುತ್ತೇವೆ. ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರೂ ಪ್ರತಿಭಟನೆ ನಡೆಸುತ್ತೇವೆ ಎಂದರು.
ದಲಿತ್ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಜು ಹೊಸ್ಮಠ ಅವರು ಮಾತನಾಡಿ, ದಲಿತ ಸಂಘಟನೆಯಿಂದ ಏನಾಗುತ್ತದೆ ಎಂದು ಸಂಪ್ಯ ಠಾಣೆಯ ಸಿಬ್ಬಂದಿ ದಿನೇಶ್ ಪ್ರಶ್ನಿಸಿದ್ದಾರೆ. ನಮ್ಮಿಂದ ಏನಾಗುತ್ತದೆ ಎಂಬುವುದನ್ನು 2ನೇ ತಾರೀಖಿಗೆ ತೋರಿಸುತ್ತೇವೆ ಎಂದರು. ಅಪ್ರಾಪ್ತ ಬಾಲಕಿಗೆ ಚಿತ್ರಹಿಂಸೆ ನೀಡಿದ ಎಸ್‍ಐ ಹಾಗೂ ಮೂವರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಿ ಅವರ ವಿರುದ್ದ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಸಂಘಟನೆಗಳ ಮುಖಂಡರಾದ ಆನಂದ್, ಶಿವಪ್ಪ ಅಟ್ಟೋಳೆ, ಪ್ರಸಾದ್ ಬೊಳ್ಮಾರು,ಮನೋಹರ್ ಕೋಡಿಜಾಲು, ಗಣೇಶ್ ಸೂಟರ್‍ಪೇಟೆ, ಗಣೇಶ್ ಕಾರೆಕ್ಕಾಡು, ,ನಿಶಾಂತ್ ಮುಂಡೋಡಿ, ಈಶು ಮುಲ್ಕಿ, ಮಣಿ ರೇಂಜರ್ ಪುತ್ತೂರು, ನಾಗೇಶ್ ಮಂಗಳೂರು, ಸುಂದರ ಸಿದ್ಯಾಳ, ಕೇಶವ್ ಪಡೀಲು, ಸಂಜೀವ ಕೋಟ್ಯಾನ್, ಆನಂದ್ ದರ್ಬೆ, ಲಲಿತಾ ನಾಯ್ಕ್ ಮೊಟ್ಟೆತ್ತಡ್ಕ, ಕೇಶವ್ ಕುಪ್ಲಾಜೆ, ಸುರೇಶ್ ತೋಟಂತಿಲ, ಅಣ್ಣಪ್ಪ ಕಾರೆಕ್ಕಾಡುದೇವಪ್ಪ, ಮನೋಹರ್ ಕಾರೆಕ್ಕಾಡು, ಗುರುವಪ್ಪ, ಮೋಹನ್ ನೆಲ್ಲಿಗುಂಡಿ, ರೋಹಿತ್ ಅಮ್ಚಿನಡ್ಕ, ಗುರುವಪ್ಪ ಪುರುಷರಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.







