ಶಪಥ ಮುರಿದು ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಜನಾರ್ದನ ಪೂಜಾರಿ

ಮಂಗಳೂರು: ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದೇನೆ, ಮನ್ನಿಸು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ನಗರದ ಕುದ್ರೋಳಿ ದೇವಸ್ಥಾನಕ್ಕೆ ರವಿವಾರ ಜನಾರ್ದನ ಪೂಜಾರಿ ಅವರು ಭೇಟಿ ನೀಡಿ, ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಶಪಥವನ್ನು ಮುರಿದಿದ್ದಾರೆ.
ಒಂದು ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲುವು ಸಾಧಿಸದಿದ್ದರೆ ಕುದ್ರೋಳಿ ದೇವಸ್ಥಾನ ಪ್ರವೇಶ ಮಾಡುವುದಿಲ್ಲ ಎಂದು ಜನಾರ್ದನ ಪೂಜಾರಿ ಶಪಥ ಮಾಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ವಿರುದ್ಧ ಮಿಥುನ್ ರೈ ಸೋಲು ಕಂಡಿದ್ದರು.
ಜನಾರ್ದನ ಪೂಜಾರಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೂವಾರಿಯಾಗಿದ್ದಾರೆ. ಪ್ರತಿಜ್ಞೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.







