ಪತ್ರಕರ್ತ ಡಿ.ಉಮಾಪತಿಗೆ ‘ಬಿ.ರಾಚಯ್ಯ ಸ್ಮಾರಕ ಪ್ರಶಸ್ತಿ’

ಬೆಂಗಳೂರು, ಜೂ.30: ಪತ್ರಕರ್ತ, ವೈಚಾರಿಕ ಬರಹಗಾರ ಡಿ.ಉಮಾಪತಿ ಅವರನ್ನು ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ನೀಡುವ ರಾಜ್ಯಮಟ್ಟದ ‘ಬಿ.ರಾಚಯ್ಯ ಸ್ಮಾರಕ ರಾಜ್ಯಪ್ರಶಸ್ತಿ’ ಗೆ ಆಯ್ಕೆ ಮಾಡಲಾಗಿದೆ.
19 ವರ್ಷಗಳಿಂದ ವೃತಿಪರ ಮತ್ತು ಸಂಘಟನಾತ್ಮಕವಾಗಿ ಮುನ್ನಡೆಯುತ್ತಿರುವ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಪರವಾಗಿ ಮತ್ತು ವೈಚಾರಿಕ ಬರಹಗಳಿಂದ ಸಮಾಜದ ಒಳಿತಿಗಾಗಿ ಅಹರ್ನಿಶಿ ದುಡಿಯುತ್ತಿರುವ ಹಿರಿಯ ಪತ್ರಕರ್ತರನ್ನು ಗುರುತಿಸಿ , ಮಾಜಿ ರಾಜ್ಯಪಾಲರು, ಹಿರಿಯ ದಲಿತ ನಾಯಕರೂ ಆಗಿದ್ದ ದಿವಂಗತ ಬಿ.ರಾಚಯ್ಯ ಅವರ ಸ್ಮರಣಾರ್ಥ ದತ್ತಿನಿಧಿಯಡಿ ರಾಜ್ಯಮಟ್ಟದ ಬಿ.ರಾಚಯ್ಯ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. 2018-19ನೇ ಸಾಲಿನ ಬಿ.ರಾಚಯ್ಯ ಸ್ಮಾರಕ ಪ್ರಶಸ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರು, ಮಾನವೀಯ ಮತ್ತು ವೈಚಾರಿಕ ವರದಿಗಳಿಂದ ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ , ಕನ್ನಡ ಪ್ರಭ, ದೆಹಲಿಯಿಂದ ಪ್ರಜಾವಾಣಿ, ವಿಜಯಕರ್ನಾಟಕ ಸೇರಿದಂತೆ ಅನೇಕ ಸುದ್ದಿ ಮಾಧ್ಯಮಗಳಿಗೆ ಅಂಕಣ ಬರಹ, ವಿಶ್ಲೇಷಣಾ ಬರಹ, ವರದಿಗಾರಿಕೆ ಮಾಡುತ್ತಿದ್ದ ಡಿ.ಉಮಾಪತಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಸನ್ಮಾನ ಫಲಕಗಳನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಸಂಘವು ಹಿರಿಯ ಪತ್ರಿಕಾ ಸಂಪಾದಕರೊಬ್ಬರಿಗೆ ನೀಡುವ ರಾಜ್ಯ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಿಕಾ ಸಂಪಾದಕ ಶಂಕರಪ್ಪಹುಸನಪ್ಪ ಛಲವಾದಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆ ಸಮಾರಂಭವು ಜು.7ರಂದು ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದ ಶ್ರೀ ಮುರುಘಾ ಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ನಡೆಯಲಿದೆ. ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಡಾ.ಅನ್ನದಾನಿ, ಜೆ.ಎಚ್.ತಿಪ್ಪಾರೆಡ್ಡಿ, ರಘುಮೂರ್ತಿ, ವಿಧಾನಪರಿಷತ್ ಸದಸ್ಯ ರಘು ಆಚಾರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಭೃಂಗೀಶ್ ಎನ್., ಸಣ್ಣ ಮತ್ತು ಮಧ್ಯಮ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಶ.ಮಂಜುನಾಥ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವಿಶಾಲಾಕ್ಷಿನಟರಾಜ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಚೆಲುವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







