ನಿರುದ್ಯೋಗ ಹೆಚ್ಚಿದೆ ಎಂಬ ವರದಿ ಪೂರ್ಣ ನಿಜವಲ್ಲ: ಸರಕಾರ

ಹೊಸದಿಲ್ಲಿ, ಜು.1: ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿದೆ ಎಂಬ ವರದಿ ಪೂರ್ಣ ನಿಜವಲ್ಲ. ಇಂತಹ ವರದಿಗಳು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿವೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದು ಉದ್ಯೋಗ ಸೃಷ್ಟಿ ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಸರಕಾರ ನಿರುದ್ಯೋಗ ವಿಷಯದ ಬಗ್ಗೆ ಗಮನ ಹರಿಸಿದ್ದು, ಶೀಘ್ರವೇ ವರದಿಯೊಂದನ್ನು ಸಿದ್ಧಪಡಿಸಲಿದೆ. ದೇಶದಲ್ಲಿರುವ ಉದ್ಯೋಗ ಸ್ಥಿತಿಯ ಬಗ್ಗೆ ತಾನು ಚರ್ಚೆಗೆ ಸಿದ್ಧ ಎಂದು ಸಚಿವರು ಹೇಳಿದರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಸದಸ್ಯ ಅಡೂರು ಪ್ರಕಾಶ್, ದೇಶದಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಧಿಕವಾಗಿದ್ದು, ಸರಕಾರ ಉದ್ಯೋಗ ಸೃಷ್ಟಿಗೆ ಯಾವುದಾದರೂ ಯೋಜನೆ ರೂಪಿಸಿದೆಯೇ ಎಂದು ಪ್ರಶ್ನಿಸಿದ್ದರು. ನಿರುದ್ಯೋಗ ಹೆಚ್ಚಿದೆ ಎಂಬ ವರದಿ ಪೂರ್ಣ ನಿಜವಲ್ಲ ಎಂದು ವಿಪಕ್ಷದ ಸದಸ್ಯರ ಪ್ರತಿಭಟನೆಯ ಮಧ್ಯೆಯೇ ಸಚಿವರು ಉತ್ತರಿಸಿದರು.
2018-19ರ ಅವಧಿಯಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಲ್ಲಿ 5,86,728 ಜನರಿಗೆ ಉದ್ಯೋಗ ಸೃಷ್ಟಿಸಲಾಗಿದೆ(2019ರ ಮಾರ್ಚ್ 1ರ ಅಂಕಿಅಂಶ) ಎಂದು ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದರು. ಅಲ್ಲದೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 2019ರ ಮಾರ್ಚ್ 1ಕ್ಕೆ ಅನ್ವಯಿಸುವಂತೆ 18.26 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಪ್ರಧಾನಮಂತ್ರಿ ರೋಜಗಾರ್ ಪ್ರೋತ್ಸಾಹನ ಯೋಜನೆಯಡಿ, ಎಲ್ಲಾ ಕ್ಷೇತ್ರಗಳ ಹೊಸ ಉದ್ಯೋಗಿಗಳಿಗೆ ಮೂರು ವರ್ಷದ ಅವಧಿಗೆ ಉದ್ಯೋಗದಾತರ ಸಂಪೂರ್ಣ ಪ್ರಾವಿಡೆಂಟ್ ಕೊಡುಗೆಯನ್ನು ಮತ್ತು ಉದ್ಯೋಗಿಗಳ ಪಿಂಚಣಿ ಯೋಜನೆಯ ಕೊಡುಗೆಯನ್ನು ಸರಕಾರ ಪಾವತಿಸುತ್ತದೆ. 2019ರ ಜೂನ್ 16ರವರೆಗೆ 1.21 ಕೋಟಿ ಫಲಾನುಭವಿಗಳು ಇದರ ಸೌಲಭ್ಯ ಪಡೆದಿದ್ದಾರೆ ಎಂದು ಸಚಿವ ಗಂಗ್ವಾರ್ ಹೇಳಿದರು.







