ಯುಟಿಕೆ ವಿರುದ್ಧದ 'ಶೋಭಾ' ಆರೋಪ ಹಾಸ್ಯಾಸ್ಪದ : ಫಾರೂಕ್ ಉಳ್ಳಾಲ್

ಮಂಗಳೂರು : ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಯು.ಟಿ. ಖಾದರ್ ಕಾರಣ ಎಂಬ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ ತೀರಾ ಬಾಲಿಶತನದ್ದು, ಭಗ್ನ ಪ್ರೇಮಿಯೊಬ್ಬನ ಹತಾಶೆಯ ಪರಾಕಾಷ್ಠೆಯಲ್ಲೂ ವಿದ್ವಂಸಕ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸುವ ಕರಂದ್ಲಾಜೆಯ ಮಾತು ಹಾಸ್ಯಾಸ್ಪದ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಹೇಳಿದ್ದಾರೆ.
ಸ್ವಯಂ ಕರ್ತವ್ಯ ಲೋಪ ಎಸಗುತ್ತಲೇ, ಇನ್ನೊಬ್ಬರ ಜವಾಬ್ದಾರಿಯನ್ನು ಪ್ರಶ್ನಿಸುವ ಶೋಭಾ ರ ಹಗುರ ಮಾತು, ಈ ವರ್ಷದ ಬಿಗ್ ಜೋಕ್ ಎಂದೂ ಶ್ರೀ ಫಾರೂಕ್ ಉಳ್ಳಾಲ್ ಲೇವಡಿ ಮಾಡಿದ್ದಾರೆ.
ಅಮಾಯಕ ಹೆಣ್ಣು ಮಗಳು ರಕ್ತದ ಮಡುವಿನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಸಂದರ್ಭದಲ್ಲಿ, ಮನುಷ್ಯ ಸಹಜ ಕರ್ತವ್ಯವನ್ನು ಮರೆತವರಂತೆ, ತಾವು ಹೊಂದಿರುವ ಹುದ್ದೆಯ ಘನತೆಯನ್ನೂ ಗಾಳಿಗೆ ತೂರಿ, ಮಾಧ್ಯಮಗಳ ಮುಂದೆ ನಿಂತು, ಕೇವಲವಾಗಿ ಮಾತನಾಡಿ, ಶೋಭಾ ಹೊರಿಸಿದ ಸುಳ್ಳಾರೋಪ ಜಿಲ್ಲೆಯಲ್ಲಿ ಶಾಂತಿ ಬಯಸುವ ನಾಗರಿಕರ ಮನ ನೋಯಿಸಿದೆ.
ಹಿಂದುತ್ವದ ದೀಕ್ಷೆ ತೊಟ್ಟವರಂತೆ ಮಾತನಾಡುವ ಕರಂದ್ಲಾಜೆಯವರಿಗೆ ಜಿಲ್ಲೆಯ ಅಶಾಂತಿಗೆ ಯಾರು ಕಾರಣ ಎಂಬ ಸ್ಪಷ್ಟ ಅರಿವಿದ್ದರೂ ರಾಜಕೀಯ ಕಾರಣಕ್ಕಾಗಿ ಅದನ್ನು ಹೇಳದೆ, ಉಸ್ತುವಾರಿ ಸಚಿವರ ಮೇಲೆ ಗೂಬೆ ಗೂರಿಸುತ್ತಿದ್ದಾರೆ.
ಸಚಿವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಕ್ಕೆ, ಸಿಕ್ಕ ಅವಕಾಶಗಳನ್ನೆಲ್ಲಾ ಬಳಸುತ್ತಿರುವ ಕರಂದ್ಲಾಜೆ, ಎರಡು ದಿನಗಳ ಹಿಂದೆ ಸಂಘ ಪರಿವಾರದ ಹಿರಿಯ ನಾಯಕರೊಬ್ಬರು ಖಾಸಗಿ ಕಾರ್ಯಕ್ರಮವೊಂದರಲ್ಲಿ 'ಖಾದರ್ ವ್ಯಕ್ತಿ ಯಲ್ಲ, ಶಕ್ತಿ'ಎಂದು ಸಾರ್ವಜನಿಕವಾಗಿ ಶ್ಲಾಘಿಸಿರುವ ಮಾಧ್ಯಮ ವರದಿಯ ಕಡೆ ಕಣ್ಣೋಡಿಸಲಿ, ಇದು ಶೋಭಾ ಆರೋಪ ಕಪೋಲಕಲ್ಪಿತ ಎನ್ನಲು ಸೂಕ್ತ ಸಾಕ್ಷಿಯಾಗಿದೆ ಎಂದು ಹೇಳಿರುವ ಫಾರೂಕ್ ಉಳ್ಳಾಲ್,
ವಿದ್ಯಾರ್ಥಿನಿ 'ದೀಕ್ಷಾ' ಳ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಪ್ರಚೋದನಾತ್ಮಕವಾಗಿ ಬಿಂಬಿಸಿ ಜಿಲ್ಲೆಯ ಶಾಂತಿಯನ್ನು ಹದಗೆಡಿಸಲು ಪ್ರಯತ್ನಿಸುವುದನ್ನು 'ರಾಜಕಾರಣ' ಎಂದು ಹೇಳಲಾಗದು, ದಯವಿಟ್ಟು ಇನ್ನಾದರೂ ಶೋಭಾ, ರಚನಾತ್ಮಕವಾಗಿ ರಾಜಕೀಯ ಮಾಡುವಂತಾಗಲಿ ಎಂದು ಆಶಿಸುವೆ ಎಂದೂ ಪತ್ರಿಕಾ ಹೇಳಿಕೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







