ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.2: ಪತಿ ಮದ್ಯ ಸೇವಿಸಿ, ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಪತ್ನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದಿದೆ.
ಮಲ್ಲಸಂದ್ರದ 5ನೇ ಕ್ರಾಸ್ನ ಗೀತಾ(35) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ನ ನಿರ್ವಾಹಕನಾಗಿದ್ದ ಭೀಮಪ್ಪ ಎಂಬವರನ್ನು 14 ವರ್ಷಗಳ ಹಿಂದೆ ಗೀತಾ ವಿವಾಹವಾಗಿದ್ದರು. ಇವರಿಗೆ ಆಕಾಶ್(12) ಹಾಗೂ ಕೈಲಾಶ್(6) ಎಂಬ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಮದ್ಯ ಸೇವನೆ ಚಟ ಅಂಟಿಸಿಕೊಂಡಿದ್ದ ಭೀಮಪ್ಪ, ಕೆಲಸ ಮುಗಿಸಿಕೊಂಡು ಬಂದು ಗೀತಾಗೆ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಬುದ್ಧಿ ಹೇಳಿದರೂ ಭೀಮಪ್ಪನ ವರ್ತನೆ ಸರಿ ಹೋಗಿರಲಿಲ್ಲ. ಗೀತಾ ಅವರ ಪೋಷಕರು, ಸಹೋದರರು ಬಂದು ಬುದ್ಧಿವಾದ ಹೇಳಿದ್ದರೂ ವರ್ತನೆ ಬದಲಿಸಿಕೊಳ್ಳದ ಭೀಮಪ್ಪ, ಕಿರುಕುಳ ನೀಡುವುದನ್ನು ಮುಂದುವರೆಸಿದ್ದ ಎನ್ನಲಾಗಿದೆ.
ಸೋಮವಾರ ರಾತ್ರಿ 7 ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ, ಗೀತಾ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಬಾಗಲಗುಂಟೆ ಪೊಲೀಸರು ಭೀಮಪ್ಪನ ಬಂಧನಕ್ಕೆ ಮುಂದಾಗಿದ್ದಾರೆ.







