ದುರ್ಬಲ ಮುಂಗಾರಿನ ನಡುವೆ ಕೊಡಗಿನ ವಿವಿಧೆಡೆ ಉತ್ತಮ ಮಳೆ

ಮಡಿಕೇರಿ, ಜು.2 : ಕಾವೇರಿಯ ಒಡಲು ತುಂಬುವ ಕೊಡಗಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅತ್ಯಂತ ದುರ್ಬಲವಾಗಿದ್ದು, ಉತ್ತಮ ಮಳೆಯ ನಿರೀಕ್ಷೆಗಳು ಹುಸಿಗೊಂಡಿರುವ ಹಂತದಲ್ಲೆ, ಜಿಲ್ಲೆಯ ವಿವಿಧೆಡೆ ಇಂದು ಉತ್ತಮ ಮಳೆಯಾಗಿದೆ.
ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭಗೊಳ್ಳುತ್ತದೆಯಾದರೂ, ಈ ಬಾರಿ ಜೂನ್ ತಿಂಗಳು ಪೂರ್ಣಗೊಂಡು ಜುಲೈಗೆ ಹೆಜ್ಜೆ ಹಾಕಿರುವ ಹಂತದಲ್ಲೂ ನಿರಂತರವಾದ ಉತ್ತಮ ಮಳೆಯಾಗದಿರುವುದು ಕೃಷಿಕ ಸಮೂಹದೊಂದಿಗೆ ನಗರ ಪ್ರದೇಶದ ಜನರಲ್ಲೂ ಆತಂಕವನ್ನು ಹುಟ್ಟು ಹಾಕಲಾರಂಭಿಸಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಮೋಡಗಳು ಕಾಣಿಸಿಕೊಳ್ಳುತ್ತಿದ್ದರು, ಅದು ಉತ್ತಮ ಮಳೆಯಾಗಿ ಮಾತ್ರ ಸುರಿಯುತ್ತಿಲ್ಲ. ಬದಲಾಗಿ ಹನಿ ಮಳೆಯಾಗಿ ಕರಗಿ ಹೋಗುತ್ತಿತ್ತು. ಇದಕ್ಕೆ ವಿರುದ್ಧವೆಂಬಂತೆ ಇಂದು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಉತ್ತಮ ಮಳೆಯಾಗಿದೆ.
ಕಳೆದ ಸಾಲಿನ ಮಳೆಯ ಚಿತ್ರಣವನ್ನು ಗಮನಿಸಿದಾಗ, ಈ ಬಾರಿಯಂತೆ ಹಿಂದಿನ ಸಾಲಿನಲ್ಲಿಯೂ ಜೂನ್‍ನಲ್ಲಿ ನಿರೀಕ್ಷಿತ ಮಳೆಯಾಗಿರಲಿಲ್ಲ. ಆದರೆ, ಅದಕ್ಕೂ ಮುಂಚಿತವಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಭರ್ಜರಿ ಮಳೆಯಾಗಿ ತೊರೆಗಳು ಉಕ್ಕಿ ಹರಿದಿದ್ದವು, ಹಾರಂಗಿ ಅಣೆಕಟ್ಟೆ ಬಹುತೇಕ ಪೂರ್ಣ ಗೊಳ್ಳುವ ಹಂತ ತಲುಪಿತ್ತು.ಈ ಬಾರಿ ಇಲ್ಲಿಯವರೆಗೆ ಅಂತಹ ಮಳೆಯಾಗದಿರುವುದರಿಂದ ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕ್ಷೀಣವಾಗಿದೆ, ಹಾರಂಗಿ ಅಣೆಕಟ್ಟೆಯ ನೀರಿನ ಮಟ್ಟ ತಳ ಸೇರಿದ ಸ್ಥಿತಿಯಲ್ಲೆ ಇದೆ.
ಏಕಾಏಕಿ ಮಳೆಯ ಆತಂಕ: ಹಿಂದಿನ 2018ನೇ ಸಾಲಿನಲ್ಲಿ ಯಾರೂ ನಿರೀಕ್ಷಿಸದಂತೆ ಆಗಸ್ಟ್ ತಿಂಗಳ ನಡು ಭಾಗದಲ್ಲಿ ನಾಲ್ಕೈದು ದಿನಗಳ ಕಾಲ ಸುರಿದ ಭಯಾನಕ ಸ್ವರೂಪದ ಮಳೆ ಪ್ರಾಕೃತಿಕ ವಿಕೋಪಗಳಿಗೆ ಎಡೆಮಾಡಿಕೊಟ್ಟಿತ್ತು. ಅದರಿಂದ ಇಲ್ಲಿಯವರೆಗೂ ಜಿಲ್ಲೆ ಸುಧಾರಿಸಿಕೊಂಡು ಮೇಲೇಳಲು ಸಾಧ್ಯವಾಗಿಲ್ಲ. ಈ ಕಹಿ ನೆನಪುಗಳ ನಡುವೆ, ಇದೀಗ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದರೂ ಮುಂಬರುವ ದಿನಗಳಲ್ಲಿ ಏಕಾಏಕಿ ಭಾರೀ ಮಳೆಯಾಗಿ ಮತ್ತೆ ಅನಾಹುತಗಳಿಗೆ ಎಡೆಮಾಡಿಕೊಟ್ಟು ಬಿಡಬಹುದೆನ್ನುವ ಆತಂಕ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.
ಜೂನ್, ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ನಿತ್ಯ ನಿರಂತರವಾಗಿ ಸುರಿಯುತ್ತಿದ್ದ ಮಳೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಆತಂಕವನ್ನು ದೂರಮಾಡುತ್ತಿತ್ತು. ಆದರೆ, ಈ ಬಾರಿ ವರ್ಷದಾರಂಭದಿಂದ ಇಲ್ಲಿಯವರೆಗೆ ಉತ್ತಮ ಮಳೆಯಾಗದಿರುವುದು ಹಾಗೂ ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಪರಿಣಾಮಗಳಿಂದ ಅಂತರ್ಜಲ ಮಟ್ಟದಲ್ಲಿ ಏರು ಪೇರಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಕಾವೇರಿಯ ನಾಡಲ್ಲಿ ನೀರಿನ ಹಾಹಾಕಾರವೇಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಎಲ್ಲರ ಚಿತ್ತ ಕಾವೇರಿಯತ್ತ: ಮುಂಗಾರಿನ ಅವಧಿಯಲ್ಲಿ ಕೊಡಗಿನಲ್ಲಿ ಸುರಿಯುವ ಮಲೆ ಕಾವೇರಿಯ ಒಡಲನ್ನಷ್ಟೇ ತುಂಬುವುದಲ್ಲ, ಇದರೊಂದಿಗೆ ಕೆಆರ್‍ಎಸ್ ಭರ್ತಿಗೆ ಕಾರಣವಾಗುವುದರೊಂದಿಗೆ ಕೋಟ್ಯಾಂತರ ಜನರ ಬದುಕನ್ನು ಹಸನುಗೊಳಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಕೊಡಗಿನಲ್ಲಿ ಇನ್ನಾದರು ಉತ್ತಮ ಮಳೆಯಾಗಿ ನಾಡಿನಲ್ಲಿ ಸುಭಿಕ್ಷೆ ಮನೆಮಾಡಲಿ ಎನ್ನುವ ಹಾರೈಕೆ ಪ್ರತಿಯೊಬ್ಬರದ್ದು.








