ಕಲ್ಯಾಣಪುರ: ಸಂತೆಕಟ್ಟೆಯ ಮಾರುಕಟ್ಟೆ ಉದ್ಘಾಟನೆಗೆ ಸಜ್ಜು

ಉಡುಪಿ, ಜು.2: ನಗರಸಭೆ ವತಿಯಿಂದ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾರುಕಟ್ಟೆ ಉದ್ಘಾಟನೆಗೆ ಸಜ್ಜಾಗಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅದರ ಕೆಲಸ ಕಾರ್ಯಗಳನ್ನು ಪರಿಶೀಲಿಸಲು ಸೋಮವಾರ ಸಂಬಂಧಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಶಾಸಕರ ಜೊತೆ ನಗರಸಭಾ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್, ನಗರಸಭಾ ಇಂಜಿನಿಯರ್ ಗಣೇಶ್, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಜಯಂತಿ, ಗಿರಿಧರ್ ಆಚಾರ್ಯ, ಮಂಜುನಾಥ್ ಮಣಿಪಾಲ್, ಬಾಲಕೃಷ್ಣ ಶೆಟ್ಟಿ ಕಕ್ಕುಂಜೆ, ಗಿರೀಶ್ ಅಂಚನ್, ಮಂಜುಳಾ ವಿ ನಾಯಕ್, ಟಿ.ಜಿ. ಹೆಗ್ಡೆ, ಪಕ್ಷದ ಪ್ರಮುಖರಾದ ದಾವೂದ್ ಅಬೂಬಕ್ಕರ್ ಹಾಗೂ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನಲ್ಲಿ (ಸಂತೆಕಟ್ಟೆ) ವೌಂಟ್ ರೋಸರಿ ಚರ್ಚ್‌ನ ಎದುರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾರುಕಟ್ಟೆ ಪರಿಸರದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲಿದೆ. ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದರೂ ಇನ್ನೂ ಉದ್ಘಾಟನೆಗೊಂಡಿಲ್ಲ.
ಈಗ ಪ್ರತಿ ರವಿವಾರ ಸಂತೆಕಟ್ಟೆ ಬಸ್‌ನಿಲ್ದಾಣದ ಎದುರೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಡೆಯುವ ವಾರದ ಸಂತೆ, ಈ ವೇಳೆ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ತಲೆನೋವಾಗಿ ಪರಿಣಮಿಸಿದೆ. ಇಲ್ಲಿನ ಹಳೆಯ ಸಂತೆ ಮಾರ್ಕೆಟ್ ಒಳಗೆ ಕುಳಿತು ವ್ಯಾಪಾರ ನಡೆಸುವುದಕ್ಕಿಂತ ಹೆಚ್ಚಾಗಿ ವ್ಯಾಪಾರಿಗಳು ರಾ.ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಅಕ್ಕಪಕ್ಕದಲ್ಲೇ ತಮ್ಮೆಲ್ಲಾ ವಸ್ತುಗಳನ್ನು ಬಿಚ್ಚಿಟ್ಟು ವ್ಯಾಪಾರ ನಡೆಸುತ್ತಾರೆ. ಇದು ಖರೀದಿಸುವ ಗ್ರಾಹಕರಿಗೂ, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೂ ಸಮಸ್ಯೆಗಳನ್ನು ತಂದೊಡುತ್ತಿವೆ.
2018ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ ಈ ಮಾರುಕಟ್ಟೆಯಲ್ಲಿ ಸುಮಾರು 90 ಮಂದಿ ಕುಳಿತುಕೊಂಡು ವ್ಯಾಪಾರ ನಡೆಸಲು ಸ್ಥಳಾವಕಾಶವಿದೆ. ನೀರು, ಪಾರ್ಕಿಂಗ್, ಚರಂಡಿ ವ್ಯವಸ್ಥೆ ಸೇರಿದಂತೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಒದಗಿಸ ಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಎಲ್ಲರೂ ಅತ್ಯಂತ ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಮಾರುಕಟ್ಟೆಯ ಉದ್ಘಾಟೆಯನ್ನೇ ಎದುರು ನೋಡುತಿದ್ದಾರೆ.
ಹೀಗಾಗಿ ಎಲ್ಲರೂ ಅತ್ಯಂತ ಸುಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಮಾರುಕಟ್ಟೆಯ ಉದ್ಘಾಟನೆಯನ್ನೇ ಎದುರು ನೋಡುತಿದ್ದಾರೆ.







