ಸಂಚಾರಿ ಪೊಲೀಸ್ ಪೇದೆಗೆ ಚಾಕು ಇರಿದ ಬೈಕ್ ಸವಾರರು

ಬೆಂಗಳೂರು, ಜು.2: ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಂಚಾರ ಪೊಲೀಸ್ ಪೇದೆ ಮೇಲೆಯೇ ಹಲ್ಲೆ ನಡೆಸಿ, ಚಾಕು ಇರಿದು ಪರಾರಿಯಾಗಿರುವ ಘಟನೆ ಇಲ್ಲಿನ ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಗರದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೇದೆ ಮಹೇಶ್ ಎಂಬುವರು ಘಟನೆಯಲ್ಲಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಇಲ್ಲಿನ ಮಣಿಪಾಲ್ ಸೆಂಟರ್ ಬಳಿಯ ಟ್ರಾಫಿಕ್ ಸಿಗ್ನಲ್ ನಲ್ಲಿ ಪೇದೆ ಮಹೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮೂವರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರನ್ನು ತಡೆದು ಪ್ರಶ್ನಿಸಿದಾಗ, ಉತ್ತರಿಸದೆ ಪರಾರಿಯಾಗಿದ್ದಾರೆ. ಬಳಿಕ, ಕೆಲ ಸಮಯದ ನಂತರ ಬಂದ ದುಷ್ಕರ್ಮಿಗಳು ಏಕಾಏಕಿ ಮಹೇಶ್ ಹಿಂಬದಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಸಹಾಯದಿಂದ ಪೇದೆ ಮಹೇಶ್ ಅನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲಸೂರು ಸಂಚಾರ ಠಾಣಾ ಪೊಲೀಸರು, ಚಾಕು ಮತ್ತು ಬೈಕ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.





