ಬಿಎಸ್‌ವೈ ಸಿಎಂ ಆಗಲು ಬಿಜೆಪಿಯೇ ಬಿಡುವುದಿಲ್ಲ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಹುಬ್ಬಳ್ಳಿ, ಜು.2: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಲೆ ರಾಜ್ಯದ ಮುಖ್ಯಮಂತ್ರಿ ಆಗಲು ಹವಣಿಸುತ್ತಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ದೋಸ್ತಿ ಸರಕಾರವನ್ನು ಅಸ್ಥಿರ ಮಾಡುವುದು ಅವರ ಉದ್ದೇಶವಾಗಿದೆ. ಆದರೆ, ಸುಮಾರು 14ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅವರನ್ನು ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಮಾಡುವುದಿಲ್ಲವೆಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಮೈತ್ರಿ ಸರಕಾರ ಪತನ ಆಗುವುದಿಲ್ಲ. ಬಿಜೆಪಿಯ ಕೇಂದ್ರ ನಾಯಕರು ದೋಸ್ತಿ ಸರಕಾರದ ಪತನಕ್ಕೆ ಅವಕಾಶ ಕೊಡುವುದಿಲ್ಲ. ಕೆಜೆಪಿ ಪಕ್ಷ ಕಾಂಗ್ರೆಸ್ ಜತೆ ವಿಲೀನವಾಗಿದೆ. ಈಗ ಕಾಂಗ್ರೆಸ್ 120 ಶಾಸಕರ ಬಲ ಹೊಂದಿದೆ. ಬಿಜೆಪಿಯದ್ದು ಕೇವಲ 105. ನಮ್ಮ 16 ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದು ಸಾಧ್ಯವಾಗದ ಮಾತು ಎಂದು ಅವರು ಹೇಳಿದರು.





