ಕರ್ನಾಟಕ ವಿವಿ: ಕುಲಪತಿ ನೇಮಕ ಸಮಿತಿಗೆ ಜೋಗನ್ ಶಂಕರ್ ಹೆಸರು ನಾಮನಿರ್ದೇಶನ
ಧಾರವಾಡ, ಜು.2: ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕದ ಶೋಧನ ಸಮಿತಿಗೆ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್ ಹೆಸರನ್ನು ಸಿಂಡಿಕೇಟ್ ನಾಮನಿರ್ದೇಶನ ಮಾಡಿದೆ.
ವಿವಿಯು ಮೂರು ಬಾರಿ ಈ ಸಂಬಂಧ ಸಭೆ ನಡೆಸಿತ್ತು. ಆದರೆ, ಹೆಸರನ್ನು ಅಂತಿಮ ಮಾಡದೇ ಗೊಂದಲಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಿಂದೆ ಶಿಫಾರಸ್ಸುಗೊಂಡಿದ್ದ ಪ್ರೊ.ಎಸ್.ಎಸ್.ಹೂಗಾರ ಹಾಗೂ ಜೋಗನ್ ಶಂಕರ್ ಹೆಸರನ್ನು ಚರ್ಚೆಗಿಡಲಾಗಿತ್ತು.
ಸಭೆಯಲ್ಲಿದ್ದ ಕೆಲವು ಸಿಂಡಿಕೇಟ್ ಸದಸ್ಯರು ಹೂಗಾರರನ್ನು ನಾಮನಿರ್ದೇಶನಕ್ಕೆ ಅಂತಿಮಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ವಿವಿ ಕಾಯ್ದೆ ಅನ್ವಯ ನಾಮನಿರ್ದೇಶನಗೊಳ್ಳುವವರು ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿರಬಾರದು ಎಂದಿದೆ. ಹೂಗಾರರು ಇದೇ ವಿವಿಯಲ್ಲಿ ಪ್ರಾಧ್ಯಾಪಕರಾಗಿ, ಡೀನ್, ಪ್ರಭಾರ ಕುಲಪತಿ ಸೇರಿದಂತೆ ಮತ್ತಿತರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅಲ್ಲದೆ, ಹೂಗಾರ ಅವರ ಮಗ ಇದೇ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿಯೂ ಇದ್ದಾರೆ. ಆದುದರಿಂದ ವಿವಿ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಕುಲಸಚಿವರು ಸಭೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅನಂತರ ಹೂಗಾರ ಹೆಸರು ಅಂತಿಮಗೊಂಡಿದೆ.
ವಿಶ್ವವಿದ್ಯಾಲಯದಲ್ಲಿ ಸೇರಿದ್ದ ಸಭೆಯಲ್ಲಿದ್ದ 10 ಜನರಲ್ಲಿ ಪ್ರೊ.ಜೋಗನ್ ಪರವಾಗಿ 6 ಜನರು ಹಾಗೂ ಪ್ರೊ.ಹೂಗಾರ ಪರವಾಗಿ 4 ಜನ ಮತ ಚಲಾಯಿಸಿದ್ದಾರೆ. ಬಹುಮತದ ಆಧಾರದ ಮೇಲೆ ಕಲಬುರ್ಗಿಯವರಾದ ಜೋಗನ್ ಹೆಸರನ್ನೇ ಶಿಫಾರಸ್ಸು ಮಾಡಲು ತೀರ್ಮಾನವಾಗಿದೆ ಎಂದು ವಿವಿ ಮೂಲಗಳು ಹೇಳಿವೆ.







