ಅತೃಪ್ತರ ಮನವೊಲಿಕೆ ಬೇಡ: ವೈಎಸ್‌ವಿ ದತ್ತ

ಬೆಂಗಳೂರು, ಜು.2: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದೊಂದೆ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಕಾಂಗ್ರೆಸ್-ಜೆಡಿಎಸ್‌ನಲ್ಲಿ ಯಾರೂ ಅತೃಪ್ತರಿಲ್ಲ. ಒಂದು ವೇಳೆ ಅತೃಪ್ತರು ಇದ್ದರೆ ಅಂತಹವರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಪಕ್ಷಗಳ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡಬಾರದು. ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಬೇರೆ ಬೇರೆ ವಿಚಾರಗಳಿಗೆ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ವಿದೇಶ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರಕಾರಕ್ಕೆ ಬಿಸಿ ಮುಟ್ಟಿಸಬಹುದು ಎಂದು ಯಾರಾದರೂ ಹೇಳಿರಬೇಕು. ಅದಕ್ಕೆ ಅವರಿಬ್ಬರೂ ರಾಜೀನಾಮೆ ಕೊಟ್ಟಿರಬಹುದು ಎಂದು ದತ್ತ ಆಕ್ರೋಶ ವ್ಯಕ್ತಪಡಿಸಿದರು.
ನಾವು ಯಾರನ್ನೂ ಓಲೈಕೆ ಮಾಡುವುದಿಲ್ಲ ಎಂದು ಮೈತ್ರಿ ಪಕ್ಷಗಳ ನಾಯಕರು ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಅವರವರ ಆತ್ಮಸಾಕ್ಷಿಗೆ ಬಿಟ್ಟು ಸುಮ್ಮನಾಗಬೇಕು. ಸುಮ್ಮನೆ ತೇಪೆ ಹಾಕುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.
ಮೈತ್ರಿ ಸರಕಾರವು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇನ್ನೂ ನಾಲ್ಕು ವರ್ಷ ಸುಭದ್ರವಾಗಿ ನಡೆಯಲಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಹೇಳಿಕೆ ಕೊಟ್ಟಿಲ್ಲ. ಅವರು ಮಾತನಾಡಿರುವುದು ಮುಂಬರುವ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್ ಹಾಗೂ ಪಾಲಿಕೆ ಚುನಾವಣೆಗಳ ಬಗ್ಗೆ ಎಂದು ದತ್ತ ತಿಳಿಸಿದರು







