ಗೋ ಶಾಲೆ ಮುಚ್ಚದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಜು.2: ಬರಗಾಲದ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಗೋ ಶಾಲೆಗಳನ್ನು ಮುಚ್ಚದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಾಜ್ಯ ಸರಕಾರ ಪುನಃ ಗೋ ಶಾಲೆಗಳನ್ನು ಮುಚ್ಚುತ್ತಿದೆ. ಗೋ ಶಾಲೆಗಳ ನಿರ್ವಹಣೆಗಾಗಿ ಹಣವನ್ನು ಮೀಸಲಿರಿಸಿಲ್ಲ. ವೈದ್ಯಾಧೀಕಾರಿಗಳ ಕೊರತೆ ಇದೆ ಎಂದು ಅರ್ಜಿದಾರರ ವಕೀಲರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ರಾಜ್ಯದಲ್ಲಿ ಎಷ್ಟು ಗೋಶಾಲೆಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ. ಗೋ ಶಾಲೆಗಳಿಗಾಗಿ ಎಷ್ಟು ಹಣ ಕಾಯ್ದಿರಿಸಲಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಲಾಗಿದೆಯೇ ಎಂಬ ಬಗ್ಗೆ ವಿವರ ನೀಡಲು ಸೂಚನೆ ನೀಡಿತು. ಶುಕ್ರವಾರ ಇನಷ್ಟು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ ನ್ಯಾಯಪೀಠವು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.





