ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ : ದ.ಕ.ಜಿ.ಪಂ. ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಸರ್ಕಾರಿ ಆಸ್ಪತ್ರೆಯ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ ದೂರು ನೀಡಿದವರು.
ಪುತ್ತೂರು ತಾಲೂಕಿನ ಕೌಡಿಚ್ಚಾರ್ ನಿವಾಸಿ ಅಪ್ರಾಪ್ತೆಯ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಲಕಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭ ಮಾಹಿತಿ ಪಡೆಯಲೆಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅರ್ಚನಾ ಅವರನ್ನು ಕರೆಯುವಂತೆ ಸೂಚಿಸಿದ್ದರು. ಆದರೆ ಸುಮಾರು ಅರ್ಧ ತಾಸುಗಳ ತನಕ ಕರ್ತವ್ಯದಲ್ಲಿ ತಲ್ಲೀನರಾಗಿದ್ದ ವೈದ್ಯರು ತಾನು ಕರೆದಾಗ ಬಂದಿಲ್ಲ ಎಂಬ ಕಾರಣಕ್ಕೆ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಡಾ. ಅರ್ಚನಾ ಅವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ತನಗೆ ಭಯ ಹುಟ್ಟಿಸುವ ರೀತಿಯಲ್ಲಿ ಬೈದಿದ್ದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಹಾಗೂ ತಾನು ಬೈಯುತ್ತಿರುವುದನ್ನು ಬೆಂಬಲಿಗರಿಂದ ವೀಡಿಯೊ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಮನಸ್ಸಿಗೆ ಘಾಸಿ ಮಾಡಿದ್ದಲ್ಲದೆ ಮಾನಹಾನಿಯನ್ನುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಆರೋಪದ ಹಿನ್ನಲೆಯಲ್ಲಿ ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
'ಶಾಸಕರಿಗೂ ಮೌಖಿಕ ದೂರು ನೀಡಲಾಗಿತ್ತು'
ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಅವರಿಗೂ ವೈದ್ಯರು ಮೌಖಿಕ ದೂರು ನೀಡಿದ್ದರು. ಶಾಸಕರು ಮಾತುಕತೆ ನಡೆಸುವ ಭರವಸೆಯನ್ನೂ ನೀಡಿದ್ದರು. ಅಲ್ಲದೆ ಭಾರತೀಯ ವೈದ್ಯರ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಘಟನೆಯನ್ನು ಖಂಡಿಸಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಪೊಲೀಸ್ ದೌರ್ಜನ್ಯ ಆದ ಅಪ್ರಾಪ್ತ ಎಸ್‍ಸಿ ಸಮುದಾಯದ ಬಾಲಕಿಯನ್ನು ಭೇಟಿ ಮಾಡಿ ವಿಚಾರಿಸಿದ ಸಂದರ್ಭ ಆಕೆಗೆ ಸ್ಕೇಲ್‍ನಲ್ಲಿ ಕೆನ್ನೆಗೆ ಹೊಡೆದಿರುವ, ಬೆತ್ತದಲ್ಲಿ ಬಡಿದಿರುವ, ಸೊಂಟದಲ್ಲಿ ಬಲ ಇಲ್ಲ ಎಂದು ದೂರಿಕೊಂಡಿದ್ದಾರೆ. ಈ ಕುರಿತು ಸ್ಪಷ್ಟಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಕೆಯನ್ನು ತಪಾಸಣೆ ನಡೆಸಿದ ವೈದ್ಯರಲ್ಲೂ ಮಾಹಿತಿ ಪಡೆದು ಕೊಳ್ಳುವ ನಿಟ್ಟಿನಲ್ಲಿ ವೈದ್ಯರನ್ನು ಕರೆದೆ. ಆದರೆ ಅಲ್ಲಿಯೇ ಓಡಾಡಿಕೊಂಡಿದ್ದ ವೈದ್ಯರು ಮುಕ್ಕಾಲು ಗಂಟೆ ಕಾದರೂ ಬರಲಿಲ್ಲ. ಡಿಎಚ್‍ಒಗೆ ದೂರು ನೀಡಿದೆ. ಅವರ ಕರೆಗೂ ಸಂಬಂಧಪಟ್ಟ ವೈದ್ಯರು ಸ್ಪಂದನೆ ನೀಡದೆ ಉದ್ದಟತನ ತೋರಿದ್ದಾರೆ. ಬಳಿಕ ನಾನೇ ವೈದ್ಯರಿದ್ದಲ್ಲಿಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ.







