ಭಟ್ಕಳ: ವಿದ್ಯುತ್ ಆಘಾತಕ್ಕೆ ಆರು ವರ್ಷದ ಬಾಲಕಿ ಮೃತ್ಯು

ಭಟ್ಕಳ: ಪ್ರಾಣಿಗಳ ರಕ್ಷಣೆಗೆಂದು ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ತಾಗಿದ ಪರಿಣಾಮ ಆರು ವರ್ಷದ ಬಾಲಕಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಗದ್ದೆ ಹುರುಳಿಸಾಲ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಹುರುಳಿಸಾಲ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಖುಷಿ ಈಶ್ವರ ನಾಯ್ಕ (6) ಎಂದು ಗುರುತಿಸಲಾಗಿದೆ.
ಶಾಲೆಯಿಂದ ಅಜ್ಜಿ ಮನೆಗೆ ಹೋಗಿದ್ದ ಖುಷಿ ಸಂಜೆ ಆಟವಾಡುತ್ತ ಮನೆಯಿಂದ ನಾಲ್ಕು ನೂರು ಮೀಟರ್ ದೂರದ ಸುಕ್ರಗೊಂಡ ಎಂಬವರ ತೋಟದ ಕಡೆಗೆ ಹೋಗಿದ್ದು, ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ಬೇಲಿಯಿಂದ ವಿದ್ಯುತ್ ಹರಿದು ಬಾಲಕಿ ಮೃತಪಟ್ಟಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಣಿಗಳ ರಕ್ಷಣೆಗೆಂದು ತೋಟಕ್ಕೆ ಆಳವಡಿಸಿದ ಬೇಲಿಗೆ ಐಬೆಕ್ಸ್ ಬ್ಯಾಟರಿಯ ಮೂಲಕ ವಿದ್ಯುತ್ ಹರಿಯಬಿಟ್ಟಿದ್ದು ಆ ವಿದ್ಯುತ್ ತಂತಿಗಳು ಮಳೆ ನೀರಿನಲ್ಲಿ ಸೇರಿದ್ದ ಪರಿಣಾಮ ಬಾಲಕಿ ಆ ನೀರಿನ ಮೂಲಕ ಹಾದುಹೋಗುವ ವೇಳೆ ಈ ದುರ್ಘಟಣೆ ಸಂಭವಿಸಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
ಈ ಕುರಿತಂತೆ ಹೆಸ್ಕಾಂ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿದ್ದು, ತೋಟದ ರಕ್ಷಣೆಗೆಂದು ಹಲವು ಕಡೆಗಳಲ್ಲಿ ಬ್ಯಾಟರಿ ಮೂಲಕ ವಿದ್ಯುತ್ ಬೇಲಿಯನ್ನು ಆಳವಡಿಸಲಾಗುತ್ತೆ. ಆದರೆ ಬಾಲಕಿ ಸಾವಿಗೆ ನಿಖರವಾದ ಕಾರಣಗಳು ತಿಳಿದುಬರುತ್ತಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಗ್ರಾಮೀಣ ಪೊಲೀಸರ ಪ್ರಕಾರ ಇದು ವಿದ್ಯುತ್ ತಂತಿಯ ಮೂಲಕ ವಿದ್ಯುತ್ ಹರಿದ ಪರಿಣಾದಿಂದಾಗಿಯೇ ಸಾವು ಸಂಭವಿಸಿದೆ ಎಂಬ ಮಾಹಿತಿ ದೊರಕಿದೆ.
ಘಟನೆಯ ಬಳಿಕ ಕಾರ್ಯಪ್ರವೃತ್ತಗೊಂಡ ಗ್ರಾಮೀಣ ಠಾಣಾಧಿಕಾರಿಗಳು ತೋಟದ ಮಾಲಿಕ ಸುಕ್ರಗೊಂಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.







