ರಸ್ತೆ ಬದಿ, ಅಂಗಡಿ ಮಳಿಗೆಗಳೆದುರು ರಾರಾಜಿಸುತ್ತಿದ್ದ ಕನ್ನಡೇತರ ನಾಮಫಲಕಗಳಿಗೆ ಗೇಟ್‍ಪಾಸ್ !

ಮಡಿಕೇರಿ, ಜು.2: ಕುಶಾಲನಗರ ರಸ್ತೆ ಬದಿ ಹಾಗೂ ವಿವಿಧ ಅಂಗಡಿ ಮಳಿಗೆಗಳ ಎದುರು ರಾರಾಜಿಸುತ್ತಿದ್ದ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೃಹತ್ತಾದ ಕನ್ನಡೇತರ ನಾಮಫಲಕಗಳೇ ಹೆಚ್ಚಾಗಿ ರಾರಾಜಿಸುತ್ತಿದ್ದು, ಇದು ರಾಜ್ಯದ ಭಾಷಾ ನೀತಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಇಲ್ಲವೇ ಆ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ಅವರು ಕೆಡಿಪಿ ಸಭೆಯಲ್ಲಿ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳು ಆಯಾ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ ಮೇರೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೋಮವಾರ ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿಯ ಹೊಸಕೋಟೆ ಮತ್ತು ಶುಂಠಿಕೊಪ್ಪ ವ್ಯಾಪ್ತಿಗಳಲ್ಲಿ ರಾರಾಜಿಸುತ್ತಿದ್ದ ಕನ್ನಡೇತರ ಬೃಹತ್ ಜಾಹಿರಾತು ನಾಮಫಲಕಗಳನ್ನು ತೆರವುಗೊಳಿಸಿದ್ದಾರೆ. ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ನಿಮಯ ಉಲ್ಲಂಘಿಸಿ ಅಳವಡಿಸಿದ್ದ ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನಿಲ್, ಸರ್ಕಾರಿ ಆದೇಶದಂತೆ ನಾಮಫಲಕಗಳಲ್ಲಿ ಶೇ.60 ರಷ್ಟು ಜಾಗ ಕನ್ನಡ ಭಾಷೆಯಲ್ಲಿರಬೇಕು. ಉಳಿದಂತೆ ಅದರ ಕೆಳಭಾಗದಲ್ಲಿ ಶೇ.40ರಷ್ಟು ಜಾಗದಲ್ಲಿ ಅನ್ಯ ಭಾಷೆಗಳನ್ನು ಬಳಸಬಹುದಾಗಿದೆ. ಆದರೆ ಜಾಹೀರಾತು ಸಂಸ್ಥೆಗಳು ಮತ್ತು ಅಂಗಡಿ ಮಾಲಕರು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡದೆ ಕನ್ನಡೇತರ ಭಾಷೆಗಳಿಗೆ ಆದ್ಯತೆ ನೀಡಿರುವುದು ಗೋಚರಿಸಿದೆ. ಇವುಗಳನ್ನು ತೆರವುಗೊಳಿಸಲು ಆಯಾಯ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದವರ ಅಂಗಡಿಯ ಪರವಾನಗಿಯನ್ನು ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿರುವ ಕನ್ನಡೇತರ ನಾಮಫಲಕ ತೆರವುಗೊಳಿಸುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನಾಮಫಲಕಗಳನ್ನು ಅಳವಡಿಸಲು ಒಪ್ಪಿಗೆ ಪತ್ರಕ್ಕೆ ಬರುವ ಸಂದರ್ಭ ಸರ್ಕಾರದ ನಿಯಮದಂತೆ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳಿಗೆ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದ ಮೇರೆಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಕೂಡ ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಪಂಚಾಯತ್ ಸಿಬ್ಬಂದಿಗಳು ಮುಂದಾಗಿದ್ದಾರೆ. ಸರಕಾರಿ ಆದೇಶದಂತೆ ಶೇ.60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕಗಳು ಇರಬೇಕೆಂದು ಆದೇಶವಿದ್ದರೂ, ಸುಂಟಿಕೊಪ್ಪ ನಗರದಲ್ಲಿ ಕಾನೂನನ್ನು ಉಲ್ಲಂಘಿಸಿ ಹೊಟೇಲು, ಅಂಗಡಿ ಮುಂಗಟ್ಟುಗಳಲ್ಲಿ, ವಿವಿಧ ದೂರವಾಣಿ ಸಂಸ್ಥೆಗಳ ಜಾಹೀರಾತು ಫಲಕ ಮತ್ತು ಇತರ ವಸತಿ ಗೃಹಗಳ ಮೇಲ್ಭಾಗಗಳಲ್ಲಿ ಎದ್ದು ಕಾಣುವಂತೆ ಅಳವಡಿಸಿದ್ದ ಆಂಗ್ಲ ಭಾಷೆಯ ಬೃಹತ್ ಗಾತ್ರದ ನಾಮಫಲಕಗಳನ್ನು ಗ್ರಾಮ ಪಂಚಾಯತ್ ಸಿಬ್ಬಂದಿ ತೆರವುಗೊಳಿಸಿದರು.
ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡದೆ ನಾಮಫಲಕ ಅಳವಡಿಸಿ ನಿಯಮವನ್ನು ಉಲ್ಲಂಘಿಸಿದ ಅಂಗಡಿ ಮಾಲಕರಿಗೆ ಮೊದಲಿಗೆ 500 ರೂ. ದಂಡ, ನಂತರ ಪರವಾನಗಿ ರದ್ದುಪಡಿಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷರು ರೋಸ್‍ಮೇರಿ ರಾಡ್ರಿಗಸ್ ತಿಳಿಸಿದ್ದಾರೆ.







