ಭಾರತದ ಕ್ರೈಸ್ತ ಸನ್ಯಾಸಿನಿಗೆ ಸಂತ ಪದವಿ

ತ್ರಿಶ್ಶೂರ್, ಜು.3: ಸೈರೊ ಮಲಬಾರ್ ಕೆಥೊಲಿಕ್ ಚರ್ಚ್ನಲ್ಲಿ ಸಿಸ್ಟರ್ ಆಫ್ ಹೋಲಿ ಫ್ಯಾಮಿಲಿ ಕಾಂಗ್ರೆಗೇಶನ್ ಆರಂಭಿಸಿದ ಮರಿಯಮ್ ತ್ರೇಸಿಯಾ ಅವರಿಗೆ ಸಂತ ಪದವಿ ನೀಡಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 13ರಂದು ಅಧಿಕೃತವಾಗಿ ಇವರ ಸಂತ ಪದವಿಯನ್ನು ಆಂಗೀಕರಿಸಲಾಗುತ್ತದೆ. 16ನೇ ಶತಮಾನದ ಫ್ರಾನ್ಸಿಸ್ಕನ್ ಗೊನ್ಸಾಲೊ ಗರ್ಸಿಯಾ ಅವರಿಗೆ 1862ರಲ್ಲಿ ಸಂತ ಪದವಿ ಕರುಣಿಸಿದ ಬಳಿಕ ಈ ಪದವಿ ಗಳಿಸುತ್ತಿರುವ ಆರನೇ ಭಾರತೀಯ ಸಂಜಾತೆ ಇವರಾಗಿದ್ದಾರೆ.
ಸಿಸ್ಟರ್ ಆಫ್ ಹೋಲಿ ಫ್ಯಾಮಿಲಿ ಸಭಾದ ಅಧಿಕಾರಿಗಳ ಪ್ರಕಾರ, ಪೋಪ್ ಫ್ರಾನ್ಸಿಸ್ ಅವರು ಮರಿಯಮ್ ತ್ರೇಸಿಯಾ ಚಿರಮೆಲ್ ಮಂಕಿಡಿಯನ್ ಅವರ ಸಂತ ಪದವಿಗೆ ಆಂಗೀಕಾರ ನೀಡಿದ್ದು, ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಪವಿತ್ರ ಸಮಾವೇಶದಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ.
ಮರಿಯಮ್ ತ್ರೇಸಿಯಾ, 1876ರ ಎಪ್ರಿಲ್ 26ರಂದು ತ್ರಿಶ್ಶೂರ್ ಜಿಲ್ಲೆಯ ಪುತೆಂನ್ಚೆರಿಯಾದಲ್ಲಿ ಜನಿಸಿದ್ದರು. 1926ರ ಜೂನ್ 8ರಂದು ಕುಳಿಕ್ಕತ್ತುಸ್ಸೇರಿಯಲ್ಲಿ ನಿಧನರಾಗಿದ್ದರು. ಪೋಪ್ ಸೆಂಟ್ ಜಾನ್ ಪಾಲ್ 2 ಅವರು ಆಕೆಯನ್ನು 2000ನೇ ಎಪ್ರಿಲ್ 9ರಂದು ಸಂತ ಪದವಿಗೆ ಪೂರ್ವಭಾವಿಯಾಗಿ ಹರಸುವ ಘೋಷಣೆ ಮಾಡಿದ್ದರು.