ಸುಪ್ರೀಂ ಕೋರ್ಟ್ ತೀರ್ಪುಗಳು ಶೀಘ್ರ ಕನ್ನಡ ಸೇರಿದಂತೆ 7 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ

ಹೊಸದಿಲ್ಲಿ, ಜು.3: ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಶೀಘ್ರವೇ ಕನ್ನಡ ಮತ್ತು ತಮಿಳು ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿವೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ನ್ಯಾ.ರಂಜನ್ ಗೊಗೊಯಿ ಅವರು,ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಜನರು ತಮ್ಮ ಮಾತೃಭಾಷೆಯಲ್ಲಿ ಓದಲು ಸಾಧ್ಯವಾಗಬೇಕು ಎಂದು ತಾನು ಬಯಸಿದ್ದೇನೆ ಎಂದು ಹೇಳಿದ್ದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಅದರ ಜಾಲತಾಣಗಳಲ್ಲಿ ಹಿಂದಿ, ಕನ್ನಡ, ತೆಲುಗು, ಅಸ್ಸಾಮೀ, ಮರಾಠಿ, ಒಡಿಯಾ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಾಗಲಿವೆ. ಅನುವಾದಗಳು ಈ ತಿಂಗಳ ಅಂತ್ಯದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮೂಲಗಳು ತಿಳಿಸಿದವು.
ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿದ್ದ ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಅವರು,ಪಟ್ಟಿಯಲ್ಲಿ ತಮಿಳು ಭಾಷೆಯಿಲ್ಲದಿರುವುದು ತನಗೆ ನಿರಾಶೆಯನ್ನುಂಟು ಮಾಡಿದೆ. ತಮಿಳು ಭಾಷೆಯನ್ನೂ ಈ ಪಟ್ಟಿಯಲ್ಲಿ ಸೇರಿಸುವಂತೆ ನ್ಯಾ.ಗೊಗೊಯಿ ಅವರನ್ನು ಆಗ್ರಹಿಸಿದ್ದರು.