ಭತ್ತದ ಬೆಳೆಗೆ ಪ್ರೋತ್ಸಾಹಿಸಲು ರೈತರಿಗೆ ‘ಕರಾವಳಿ ಪ್ಯಾಕೇಜ್’
ಉಡುಪಿ, ಜು.3: ಕರಾವಳಿ ಪ್ರದೇಶದಲ್ಲಿ ಮಳೆಯಾಶ್ರಿತ ಭತ್ತದ ಬೆಳೆ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಹೆಕ್ಟೇರ್‌ಗೆ 7,500 ರೂ. ಗಳಂತೆ ಪ್ರೋತ್ಸಾಹಧನವನ್ನು ನೀಡಲು ‘ಕರಾವಳಿ ಪ್ಯಾಕೇಜ್’ ಎಂಬ ಹೊಸ ಕಾರ್ಯಕ್ರಮನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕರಾವಳಿ ಪ್ಯಾಕೇಜ್ ಕಾರ್ಯಕ್ರಮದಡಿ ಭತ್ತದಲ್ಲಿ ಸುಧಾರಿತ ತಾಂತ್ರಿಕತೆ ಗಳಾದ ನೇರ ಕೂರಿಗೆ ಬಿತ್ತನೆ, ಡ್ರಂ ಸೀಡರ್ ಬಿತ್ತನೆ, ಯಾಂತ್ರೀಕೃತ ನಾಟಿ, ಸ್ಥಳೀಯ ತಳಿಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 7500 ರೂ.ವನ್ನು (ಪ್ರತಿ ರೈತರಿಗೆ ಗರಿಷ್ಟ 1ಹೆ. ಮಿತಿಗೊಳಪಟ್ಟು) ಪ್ರೋತ್ಸಾಹ ಧನವನ್ನು ಸಾಗುವಳಿ ಕ್ಷೇತ್ರಕ್ಕೆ ಅನುಗುಣವಾಗಿ ನೇರ ಸೌಲ್ಯ ವರ್ಗಾವಣೆ ಡಿಬಿಟಿ ಮೂಲಕ ನೀಡಲಾಗುವುದು.
ಸುಧಾರಿತ ತಾಂತ್ರಿಕತೆ ಹಾಗೂ ಸ್ಥಳೀಯ ಭತ್ತದ ತಳಿಯನ್ನು ಉಪಯೋಗಿಸಿ ಭತ್ತದ ಕೃಷಿ ಕೈಗೊಂಡ ಆಸಕ್ತ ರೈತರು ಕರಾವಳಿ ಪ್ಯಾಕೇಜ್ ಕಾರ್ಯಕ್ರಮದಡಿ ಪ್ರೋತ್ಸಾಹಧನ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಬಹುದು. ಜಿಲ್ಲೆಗೆ ಒಟ್ಟು 1666 ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ ಒದಗಿಸಲು (ಸಾಮಾನ್ಯ ವರ್ಗಕ್ಕೆ 1265 ಹೆ., ಪರಿಶಿಷ್ಟ ಜಾತಿ ವರ್ಗಕ್ಕೆ 286 ಹೆ. ಹಾಗೂ ಪರಿಶಿಷ್ಟ ಪಂಗಡದ ವರ್ಗಕ್ಕೆ 115 ಹೆ.) ಗುರಿ ನಿಗದಿಯಾಗಿದ್ದು, ಜೇಷ್ಠತೆಯ ಆಧಾರದ ಮೇಲೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.







