ಜಾನುವಾರು ಕಳವು ಆರೋಪದಲ್ಲಿ ವ್ಯಕ್ತಿಯ ಥಳಿಸಿ ಹತ್ಯೆಗೈದ ಗುಂಪು

ಅಗರ್ತಲಾ, ಜು.3: ತ್ರಿಪುರಾದ ದಲಾಯಿ ಜಿಲ್ಲೆಯಲ್ಲಿ ಜಾನುವಾರು ಕಳವು ಆರೋಪದಲ್ಲಿ 36 ವರ್ಷದ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪಿನಿಂದ ಥಳಿಕ್ಕೊಳಗಾಗಿ ಹತ್ಯೆಯಾದ ವ್ಯಕ್ತಿಯನ್ನು ತ್ರಿಪುರಾದ ಬುಧಿ ಕುಮಾರ್ ಎಂದು ಗುರುತಿಸಲಾಗಿದೆ. ಅಗರ್ತಲದಿಂದ 147 ಕಿ.ಮೀ. ದೂರದಲ್ಲಿರುವ ರೈಸೈಬಾರಿಯ ನೋರಂಪಾರದಲ್ಲಿ ಮಂಗಳವಾರ ರಾತ್ರಿ 11:30ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
‘‘ಗುಂಪಿನಿಂದ ಥಳಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಬುಧಿ ಕುಮಾರ್ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ’’ ಎಂದು ರೈಸೈಬಾರಿಯ ಪೊಲೀಸ್ ಠಾಣೆಯ ಉಸ್ತುವಾರಿ ರಿಯಾಂಗ್ ತಿಳಿಸಿದ್ದಾರೆ.
ಇಲ್ಲಿನ ಮನೆಯೊಂದರ ದನದ ಹಟ್ಟಿಗೆ ಬುಧಿ ಪ್ರವೇಶಿಸಿದ್ದ. ಮನೆ ಸದಸ್ಯರು ಬೊಬ್ಬೆ ಹಾಕಿದಾಗ ಆತ ಓಡಿದ್ದ. ಮನೆಯವರ ಬೊಬ್ಬೆ ಕೇಳಿ ಆಗಮಿಸಿದ ಗ್ರಾಮಸ್ತರು ಬುಧಿಯನ್ನು ಹಿಡಿದು ಥಳಿಸಿದರು ಎಂದು ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಕೂಡಲೇ ರೈಸೈಬಾರಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಬುಧಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕತ್ಸೆ ಫಲಕಾರಿಯಾಗದೆ ಆತ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ.







