ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ: ಕಠಿಣ ಕ್ರಮಕ್ಕೆ ಡಿವೈಎಫ್‌ಐ ಆಗ್ರಹ
ಮಂಗಳೂರು, ಜು.3: ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಮಾದಕ ಪದಾರ್ಥ ನೀಡಿ ಸಹಪಾಠಿ ವಿದ್ಯಾರ್ಥಿಗಳು ಗುಂಪು ಅತ್ಯಾಚಾರ ಎಸಗಿರುವ ಪ್ರಕರರಣ ಆಘಾತಾಕಾರಿಯಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿವೈಎಫ್‌ಐ ಆಗ್ರಹಿಸಿದೆ.
ಘಟನೆಯಿಂದ ಜಿಲ್ಲೆಯ ಜನತೆ ದಿಭ್ರಾಂತರಾಗಿದ್ದಾರೆ. ಈ ನಾಚಿಕೆಗೇಡಿನ ಪೈಶಾಚಿಕ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗುಂಪು ಅತ್ಯಾಚಾರ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಸಂಸದರಾದ ನಳಿನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸಹಿತ ಬಿಜೆಪಿ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಅನಗತ್ಯ ಕೋಮು ಪ್ರಚೋದನೆಯ ವಿಷಯಗಳನ್ನು ಹುಟ್ಟು ಹಾಕುವುದನ್ನು ಕೈ ಬಿಟ್ಟು ಮಾದಕ ದ್ರವ್ಯ ಮಾಫಿಯಾ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳನ್ನು ಮಟ್ಟಹಾಕುವತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಪದೇಪದೇ ಅತ್ಯಾಚಾರ, ಲೈಂಗಿಕ ಕಿರುಕುಳ, ಮಹಿಳೆಯರ ಮೇಲಿನ ದಾಳಿಯಂತಹ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಅದರಲ್ಲೂ ವಿದ್ಯಾರ್ಥಿ ಸಮೂಹ ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಗುಂಪು ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ವಿದ್ಯಾರ್ಥಿನಿಗೆ ಮಾದಕ ಪದಾರ್ಥ ನೀಡಲಾಗಿತ್ತು, ಆರೋಪಿ ವಿದ್ಯಾರ್ಥಿಗಳೂ ಗಾಂಜಾ ಸೇವಿಸಿದ್ದರು ಎನ್ನಲಾಗುತ್ತಿದ್ದು, ಇದು ಮಾದಕ ದ್ರವ್ಯ ಜಾಲ ಇಡೀ ಸಮಾಜವನ್ನು ಆವರಿಸಿರುವ ಸಂಕೇತವಾಗಿದೆ. ಒಂದೆಡೆ ಡ್ರಗ್ಸ್ ಮಾಫಿಯಾ, ಮತ್ತೊಂದೆಡೆ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿ ನೈತಿಕ ಮೌಲ್ಯಗಳನ್ನು ಕಡೆಗಣಿಸಿರುವುದು ವಿದ್ಯಾರ್ಥಿ ಸಮೂಹ ವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಾದಕ ದ್ರವ್ಯ ಜಾಲದ ಕುರಿತು ಜನಪರ ಸಂಘಟನೆಗಳು ಸತತವಾಗಿ ಧ್ವನಿ ಎತ್ತುತ್ತಾ ಬಂದಿದ್ದರೂ ಪೊಲೀಸ್ ಇಲಾಖೆ ಇಂತಹ ಮಾಫಿಯಾಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಜನರಿಗೆ ಗಾಂಜಾದಂತಹ ಮಾದಕ ವಸ್ತುಗಳು ಬಹಳ ಸುಲಭವಾಗಿ ದೊರಕುತ್ತಿದ್ದು, ಇದರ ಪರಿಣಾಮವಾಗಿ ಕ್ರಿಮಿನಲ್ ಚಟುವಟಿಕೆಗಳು, ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿದೆ ಎಂದು ತಿಳಿಸಿದರು.
ಇಂತಹ ದುರಂತ ಸಾಮಾಜಿಕ ಅಶಾಂತಿಗೂ ಕಾರಣವಾಗುತ್ತಿದೆ. ಪುತ್ತೂರು ಗುಂಪು ಅತ್ಯಾಚಾರ ಪ್ರಕರಣದ ನಂತರವಾದರೂ ಜನಪ್ರತಿನಿಧಿ ಗಳು, ಸರಕಾರ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.







