ವಿಕಲಚೇತನರಿಗೆ ಆರೋಗ್ಯ ಸೇವೆ: ಅಂಕಿ-ಅಂಶ ಸಿದ್ಧಪಡಿಸಲು ಮೂರು ತಿಂಗಳು ಗಡುವು
ಬೆಂಗಳೂರು, ಜು. 3: ಬೆಂಗಳೂರು ನಗರ ಜಿಲ್ಲೆಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದಲ್ಲಿ ವಿಕಲಚೇತನರಿಗೆ ನೀಡಲಾಗಿರುವ ಸೌಲಭ್ಯಗಳು ಇನ್ನು ಮೂರು ತಿಂಗಳೊಳಗೆ ಸಮಗ್ರ ಅಂಕಿ-ಅಂಶ ಸಿದ್ಧಪಡಿಸಿ ಸಲ್ಲಿಸಬೇಕೆಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ಬಸವರಾಜು ಸೂಚಿಸಿದ್ದಾರೆ.
ಬುಧವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೈಗೊಂಡ ಪರಿಶೀಲನಾ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಬಾಲಾ ಸುರಕ್ಷಾ ಕಾರ್ಯಕ್ರಮದ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು, ಮುಖ್ಯವಾಗಿ 0-6, 6-12 ವಾರದ ಮಕ್ಕಳಿಗೆ ತಿಂಗಳಲ್ಲಿ ಎರಡು ಬಾರಿ ಆರೋಗ್ಯ ತಪಾಸಣೆ ನಡೆಸಬೇಕು. ಅದಕ್ಕೆ ಪೂರಕವಾದ ಔಷಧಗಳನ್ನು ನೀಡಬೇಕೆಂದು ತಿಳಿಸಿದರು. ಹಾಗೆಯೇ, ಎಲ್ಲ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ(ಸಿಡಿಪಿಒ)ಗಳು ಆಯಾ ತಾಲೂಕಿನಲ್ಲಿ ಪ್ರತಿ ತಿಂಗಳಿಗೊಮ್ಮೆ ವಿಕಲಚೇತನ ಮಕ್ಕಳ ಪೋಷಕರನ್ನು ಅರಿವು ಶಿಬಿರಗಳಿಗೆ ಕರೆತಂದು ಮಕ್ಕಳು ಆರೋಗ್ಯಕರವಾಗಿರಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಮತ್ತು ಶಾಲೆಗಳಿಗೆ ಮಕ್ಕಳ ಹಾಜರಾತಿ ಹಾಗೂ ಅಲ್ಲಿನ ಸೇವಾ ಗುಣಮಟ್ಟದ ಬಗ್ಗೆ ಪ್ರತಿ ತಿಂಗಳು ಪರಿಶೀಲಿಸಿ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಆಯಾ ಸರಕಾರಿ ಆಸ್ಪತ್ರೆಗಳಲ್ಲಿ ವಿಕಲಚೇತನ ಮಕ್ಕಳ ಪೋಷಕರನ್ನು ಸಭೆಗೆ ಕರೆದು ತಮ್ಮ ಮಕ್ಕಳ ಆರೈಕೆ ಬಗ್ಗೆ ಅವರಿಗೆ ಅರ್ಥವಾಗುವಂತೆ ಸರಳವಾಗಿ ವಿಡಿಯೋ ಪ್ರದರ್ಶನದ ಮೂಲಕ ಮಾಹಿತಿ ನೀಡಬೇಕು.
ಸರಕಾರಿ ನರ್ಸಿಂಗ್ ಕಾಲೇಜಿನ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ವಿಕಲಚೇತನರ ಶುಶ್ರೂಷೆ ಬಗ್ಗೆ ಹೆಚ್ಚಿನ ಅರಿವು ನೀಡಿ ಸಹಕರಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆಯು ಮಕ್ಕಳಿಗೆ ಅನುಕೂಲವಾಗುವಂತೆ ಹೆಚ್ಚಿನ ಡೇಕೇರ್ ಕೇಂದ್ರಗಳನ್ನು ತೆರೆಯಬೇಕೆಂದು ಸಲಹೆ ನೀಡಿದರು.







