ಎರಡನೇ ದಿನವೂ ಮುಂದುವರೆದ ಸಚಿವ ಜಿ.ಟಿ.ದೇವೇಗೌಡರ ನಗರ ಪ್ರದಕ್ಷಿಣೆ

ಮೈಸೂರು,ಜು.3: ಮೈಸೂರು ಮಹಾ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಕೈಗೊಂಡಿರುವ ಮೈಸೂರು ನಗರ ಪ್ರದಕ್ಷಿಣೆ ಎರಡನೇ ದಿನವಾದ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಅವರು ಚಾಮರಾಜ ಕ್ಷೇತ್ರದ ಸಬರ್ ಬಸ್ ಸ್ಟ್ಯಾಂಡ್, ಇರ್ವಿನ್ ರಸ್ತೆ, 100ಫಿಟ್ ರೋಡ್, ಸ್ವಾತಂತ್ರ ಹೋರಾಟಗಾರರ ಉದ್ಯಾನವನ, ಮೆದಾರ್ ಬ್ಲಾಕ್ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು.
ನಂತರ ಮೇಟಗಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಶೀಘ್ರದಲ್ಲಿ ಕಾಮಗಾರಿಯನ್ನು ಗುಣಮಟ್ಟದಿಂದ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಅವರ ಜೊತೆ ಕ್ಷೇತ್ರದ ಹಲವು ಮೂಲಭೂತ ಸೌಕರ್ಯಗಳು ಹಾಗೂ ಕುಂದು ಕೊರತೆಗಳ ಕುರಿತಂತೆ ಚರ್ಚೆ ನಡೆಸಿದರು. ಹಾಗೆ ಹಲವು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಮುಡಾ ಆಯುಕ್ತ ಕಾಂತರಾಜು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.





