ಪಠ್ಯ ಪೂರಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ: ಡಾ.ಜಿ.ಕಲ್ಪನಾ
ಬೆಂಗಳೂರು, ಜು.3: ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯಪೂರಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ.ಜಿ.ಕಲ್ಪನಾ ಹೇಳಿದರು.
ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ವತಿಯಿಂದ ನಗರದ ಕ್ರೀಡಾ ವಸತಿ ನಿಲಯದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸ್ವಚ್ಛತಾ ಅಭಿಯಾನದ ಐದು ದಿನಗಳ ಶಿಬಿರವನ್ನು ಉದ್ಫಾಟಿಸಿ ಮಾತನಾಡಿರುವ ಅವರು, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಮುದಾಯ ಜೀವನ ಮತ್ತು ಸರಳತೆಯ ಗುಣವನ್ನು ಬೆಳೆಸುತ್ತದೆ. ಅವರನ್ನು ಬೆಳೆಸುತ್ತಾ ಉತ್ತಮ ನಾಗರಿಕರಾಗಿ ಎಂದು ಆಶಿಸಿದರು. ಎನ್ನೆಸ್ಸೆಸ್ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಎಲ್ಲ ಮೂವತ್ತು ಜಿಲ್ಲೆಗಳಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ ಶಿಬಿರದ ಉದ್ದೇಶವನ್ನು ವಿವರಿಸಿದರು. ಶಿಬಿರಾರ್ಥಿ ಅಧಿಕಾರಿ ಡಾ. ಪ್ರತಿಭಾ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಜೋಗಿ ವಂದಿಸಿದರು. ಶಿಬಿರದಲ್ಲಿ ವಿವಿಧ ಕಾಲೇಜುಗಳ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರದಲ್ಲಿ ಸ್ವಚ್ಛತಾ ಕಾರ್ಯ, ಶ್ರಮದಾನ, ಸಾಹಸ ಕ್ರೀಡಾ ಪ್ರದರ್ಶನ ವಿಶೇಷ ಉಪನ್ಯಾಸ ತರಬೇತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ರಾಷ್ಟ್ರೀಯ ಸೇವಾ ಜನಾ ಕೋಶದ ಪ್ರಕಟಣೆ ತಿಳಿಸಿದೆ.







