ಸಾವಿರಕಂಬದ ಬಸದಿಯಲ್ಲಿ ಕಳ್ಳತನ ಪ್ರಕರಣ: ತಪ್ಪು ಮಾಹಿತಿ ಭಿತ್ತರವಾಗುವುದು ಸರಿಯಲ್ಲ
ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಸೋಮವಾರ ರಾತ್ರಿ ಕಳ್ಳತನ ಯತ್ನ ನಡೆದಿದ್ದು, ಹುಂಡಿಯಲ್ಲಿನ ಹಣಗಳನ್ನು ಕಳ್ಳರು ಕದ್ದಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿ ಇಲ್ಲಿನ ವಿಗ್ರಹಗಳು ಕಳ್ಳತನವಾಗಿದೆ ಎಂಬ ರೀತಿಯಲ್ಲಿ ಸುಳ್ಳುಸುದ್ದಿಗಳು ಭಿತ್ತರವಾಗುತ್ತಿದೆ. ಆದರೆ ಇಲ್ಲಿ ಅಂತಹ ಘಟನೆಗಳು ನಡೆದಿಲ್ಲ. ತಪ್ಪು ಸಂದೇಶ ರವಾನೆಯಾಗುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಜೈನ ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ಎಚ್.ಬಿ ದೇವೇಂದ್ರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಸದಿಗಳ ರಕ್ಷಣೆಯ ಕುರಿತು ಪೊಲೀಸ್ ಅಧಿಕಾರಿಗಳು ಸಮುದಾಯದ ಪ್ರಮುಖರ ಜೊತೆ ಚರ್ಚಿಸಿದ್ದಾರೆ. ಔಟ್‍ಪೋಸ್ಟ್, ರಾತ್ರಿ ಗಸ್ತಿನ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ. ಭಟ್ಟಾರಕರು ಅಮೇರಿಕಾ ಪ್ರವಾಸದಿಂದ ಬಂದ ನಂತರ ಬಸದಿಗಳ ಭದ್ರತೆಯ ಕುರಿತು ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ.
ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ, ಕರ್ನಾಟಕ ಜೈನ ಅಸೋಶಿಯೇಶನ್‍ನ ಕಾರ್ಯಕರಿಣಿ ಸಮಿತಿ ಸದಸ್ಯರಾದ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಪದ್ಮಪ್ರಸಾದ್ ಜೈನ್, ಜೈನ ಮುಖಂಡರಾದ ಜಯರಾಜ್ ಕಂಬ್ಳಿ, ಶೈಲೇಂದ್ರ ಕುಮಾರ್ ಆರೋಹ, ನಾಗವರ್ಮ ಜೈನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







