ಇತರರಿಗಾಗಿ ಬದುಕುವುದನ್ನು ಕಲಿಸಿಕೊಟ್ಟ ರೋಟರಿ: ಅಭಿನಂದನ್ ಶೆಟ್ಟಿ
ಮೂಡುಬಿದಿರೆ ರೋಟರಿ ಪದಗ್ರಹಣ ಸಮಾರಂಭ

ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಪೋಲೀಯೋ ಪಿಡುಗು ನಿರ್ಮೂಲನೆ ರೋಟರಿ ಸಂಸ್ಥೆಯ ಬದ್ಧತೆಯ ಸೇವೆಗೊಂದು ಅತ್ಯುತ್ತಮ ನಿದರ್ಶನ. ರೋಟರಿ ಎಂಬ ಅಂತರಾಷ್ಟ್ರೀಯ ಸಂಘಟನೆ ಇತರರಿಗಾಗಿ ಬದುಕುವುದನ್ನು ಕಲಿಸಿಕೊಡುತ್ತದೆ ಎಂದು ರೋಟರಿ ಜಿಲ್ಲೆ 3182ರ ನಿಕಟಪೂರ್ವ ರಾಜ್ಯಪಾಲ ಅಭಿನಂದನ್ ಶೆಟ್ಟಿ ಹೇಳಿದರು.
ಸ್ನೇಹಕ್ಕಾಗಿ ಹುಟ್ಟಿಕೊಂಡ ಸಂಘಟನೆ ಇದೀಗ ಸೇವಾ ಸಂಘಟನೆಯಾಗಿ ಎತ್ತರಕ್ಕೆ ಬೆಳೆದಿದ್ದರೆ ಅದು ಸ್ವಂತಕ್ಕೆ ಮೀರಿದ ಸೇವೆಯಿಂದ. ಜನಪ್ರಿಯತೆಗಿಂತ ಮಾನವೀಯತೆಯೇ ಮುಖ್ಯ ಎನ್ನುವ ಸಂದೇಶ, ಸೇವಾವಕಾಶಗಳ ಮೂಲಕ ರೋಟರಿಯಿಂದ ಬಹಳಷ್ಟು ಮಂದಿ ಪ್ರಯೋಜನ ಪಡೆದಿದ್ದಾರೆ ಎಂದವರು ಹೇಳಿದರು.
ಅವರು ಇಲ್ಲಿನ ಪ್ಯಾರಡೈಸ್ ಸಭಾಂಗಣದಲ್ಲಿ ಸೋಮವಾರ ಸಂಜೆ ಮೂಡುಬಿದಿರೆ ರೋಟರಿ ಕ್ಲಬ್‍ನ ಪ್ರಸಕ್ತ ಸಾಲಿನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಅವರು ತೆಂಗಿನ ಸಸಿಗೆ ನೀರೆರೆದು ಸಮಾರಂಭವನ್ನು ಉದ್ಘಾಟಿಸಿದರು.
ನಿರ್ಗಮನ ಅಧ್ಯಕ್ಷ ಡಾ.ರಮೇಶ್ ಸ್ವಾಗತಿಸಿ ಕಳೆದ ಸಾಲಿನಲ್ಲಿ ಕೈಗೊಂಡ ಸೇವಾ ಕಾರ್ಯಗಳು ಮತ್ತು ಸಾಧನೆಯ ಹಿನ್ನೆಲೆಯಲ್ಲಿ ಶ್ರಮಿಸಿ ದವರನ್ನು ಸ್ಮರಿಸಿಕೊಂಡರು. ಕಾರ್ಯದರ್ಶಿ ಸಿ.ಹೆಚ್. ಅಬ್ದುಲ್ ಗಫೂರ್ ವಾರ್ಷಿಕ ವರದಿ ಮಂಡಿಸಿದರು. ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗಾ ಮಾಸಿಕ ಸಂಚಿಕೆ ರೋಟಾದ್ರಿಯನ್ನು ಅನಾವರಣಗೊಳಿಸಿದರು. ವಲಯ ಲೆಫ್ಟಿನೆಂಟ್ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು. ಸುಧೀರ್ ನಾಯಕ್ ನೂತನ ಸದಸ್ಯರಾಗಿ ಕ್ಲಬ್‍ಗೆ ಸ್ವಾಗತಿಸಲಾಯಿತು.
ಸೇವಾ ಚಟುವಟಿಕೆ: ವಲಯದ ಸರ್ಕಾರಿ ಪ್ರೌಢ ಶಾಲೆಗಳ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಪ್ರಕಾಶ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ರೋಟಾಲೆಟ್ ಯೋಜನೆಯಲ್ಲಿ 125ನೇ ಫಲಾನುಭವಿಗಳಿಗೆ ಉಚಿತವಾಗಿ ನಿರ್ಮಿಸಲಾದ ಶೌಚಾಲಯ, ಸ್ನಾನಗೃಹದ ಸಾಂಕೇತಿಕ ಹಸ್ತಾಂತರ ಮಾಡಲಾಯಿತು. ಮೌಂಟ್ ರೋಸರಿ ವೃದ್ಧಾಶ್ರಮಕ್ಕೆ ವೀಲ್ ಚೇರ್ ಕೊಡುಗೆ, ಡಯಾಬಿಟಿಕ್ ಬಾಲಕಿಗೆ ಇನ್ಸುಲಿನ್ ಔಷದಿ ಕಿಟ್ ವಿತರಿಸಲಾಯಿತು.
ರೋಟಾಲೇಕ್ ಯೋಜನೆಯಡಿ ಕೆಂಪ್ಲಾಜೆ ಕೆರೆಯ ಪುನರುಜ್ಜೀವನ ಕಾರ್ಯದಲ್ಲಿ ಶ್ರಮಿಸಿದ ಡಾ. ಮುರಳೀಕೃಷ್ಣ, ಪಿ.ಕೆ.ಥಾಮಸ್, ರವಿಪ್ರಸಾದ್ ಉಪಾಧ್ಯಾಯ, ಪುರಂದರ ದೇವಾಡಿಗ, ರೋಟರಿ ಪಿಹೆಚ್‍ಎಫ್3 ಹಂತಕ್ಕೇರಿದ ಡಾ. ಮುರಳೀಕೃಷ್ಣ ಅವರನ್ನು ಗೌರವಿಸಲಾಯಿತು.
ಡಾ. ಹರೀಶ್ ನಾಯಕ್, ಡಾ.ಮುರಳೀಕೃಷ್ಣ, ಡಾ.ಅರವಿಂದ ಕಿಣಿ. ಡಾ.ಆಶೀರ್ವಾದ್, ಪಿ.ಕೆ.ಥಾಮಸ್ ಅತಿಥಿಗಳನ್ನು ಪರಿಚಯಿಸಿದರು. ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ವಿತರಿಸಲಾಯಿತು. ಎಂ.ಗಣೇಶ್ ಕಾಮತ್ ಹಾಗೂ ಅವಿಲ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ನಾಗರಾಜ್ ವಂದಿಸಿದರು.








