ವಿಂಬಲ್ಡನ್: ವಾವ್ರಿಂಕಗೆ ಒಪೆಲ್ಕಾ ಶಾಕ್

ರೆಲಿ ಒಪೆಲ್ಕಾ
ಲಂಡನ್, ಜು.3: ಅಮೆರಿಕದ 21ರ ಹರೆಯದ ಆಟಗಾರ ರೆಲಿ ಒಪೆಲ್ಕಾ ಮೂರು ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿರುವ ಸ್ಟಾನ್ ವಾವ್ರಿಂಕರನ್ನು ಸೋಲಿಸಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಮೂರನೇ ಸುತ್ತಿಗೆ ತಲುಪಿದ್ದಾರೆ.
ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ನ 2ನೇ ಸುತ್ತಿನ ಪಂದ್ಯದಲ್ಲಿ ಒಪೆಲ್ಕಾ ಅವರು ಸ್ವಿಸ್ನ 22ನೇ ಶ್ರೇಯಾಂಕದ ವಾವ್ರಿಂಕರನ್ನು 7-5, 3-6, 4-6, 6-4, 8-6 ಸೆಟ್ಗಳ ಅಂತರದಿಂದ ಸೋಲಿಸಿದರು.
ಮಾಜಿ ವಿಂಬಲ್ಡನ್ ಜೂನಿಯರ್ ಚಾಂಪಿಯನ್ ಆರಡಿ ಎತ್ತರದ ಒಪೆಲ್ಕಾ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಮಹತ್ವದ ಗೆಲುವು ಸಾಧಿಸಿದರು. ವಾವ್ರಿಂಕ ಮೂರು ಬಾರಿ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರೂ ವಿಂಬಲ್ಡನ್ನಲ್ಲಿ ಮಾತ್ರ ಈ ತನಕ ಕ್ವಾರ್ಟರ್ ಫೈನಲ್ ದಾಟಿಲ್ಲ.
ಮೂರನೇ ಸುತ್ತಿಗೆ ತಲುಪಿದ ಅಝರೆಂಕಾ
ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಆಸ್ಟ್ರೇಲಿಯದ ಅಜಲಾ ಟೊಮ್ಜಾನೊವಿಕ್ರನ್ನು 6-2, 6-0 ಸೆಟ್ಗಳ ಅಂತರದಿಂದ ಸೋಲಿಸಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಮೂರನೇ ಸುತ್ತಿಗೆ ತಲುಪಿದರು.
ಶ್ರೇಯಾಂಕರಹಿತ 29ರ ಹರೆಯದ ಅಝರೆಂಕಾ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಮೂರನೇ ಸುತ್ತಿನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್ರನ್ನು ಎದುರಿಸಲಿದ್ದಾರೆ.
ಪುತ್ರ ಲಿಯೊಗೆ ಜನ್ಮ ನೀಡಿದ ಬಳಿಕ 2ವರ್ಷಗಳ ಹಿಂದೆ ಟೆನಿಸ್ಗೆ ವಾಪಸಾಗಿದ್ದ 2 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ಅಝರೆಂಕಾ ತನ್ನ ಮೊದಲಿನ ಲಯಕ್ಕೆ ಮರಳಿದ್ದಾರೆ.
2011 ಹಾಗೂ 2012ರಲ್ಲಿ ವಿಂಬಲ್ಡನ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಅಝರೆಂಕಾ 2009 ಹಾಗೂ 2015ರಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದರು.







