ಸಾಮೂಹಿಕ ಅತ್ಯಾಚಾರದ ವೀಡಿಯೊ ಹಂಚಿಕೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಸುಳ್ಯ ತಾಲೂಕಿನ ಐವರು ವಶಕ್ಕೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅದರ ಅಶ್ಲೀಲ ವೀಡಿಯೊವನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಆರೋಪದಲ್ಲಿ ಪುತ್ತೂರು ನಗರ ಪೊಲೀಸರು ಕಬಕ ನಿವಾಸಿ ಚಂದ್ರಶೇಖರ ಮಯ್ಯ, ಮುರಳೀ ಪರ್ಲಡ್ಕ, ಪವನ್ ಕರ್ಲ್ಲರ್ಪೆ, ದೈಹಿಕ ಶಿಕ್ಷಣ ಶಿಕ್ಷಕ ಪೂವಪ್ಪ ಮತ್ತು ಶ್ರೇಯಾ ಎಂಬವರನ್ನು ಐಟಿ ಕಾಯ್ದೆಯಡಿ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಗುರುವಾರ ಸಂಜೆ ಹಾಜರುಪಡಿಸಿದಾಗ ಆರೋಪಿಗಳಿಗೆ ಒಂದು ದಿನದ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶಿಸಿತು.
ಒಂದು ದಿನದ ನ್ಯಾಯಾಂಗ ಬಂಧನಕ್ಕೆ ನೀಡಿದ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪುತ್ತೂರು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಗುರುವಾರ ಸಹಾಯಕ ಸರಕಾರಿ ಅಭಿಯೋಜಕರು ಇಲ್ಲದ ಕಾರಣ ಮತ್ತು ಆರೋಪಿತರ ಜಾಮೀನು ಅರ್ಜಿಯ ವಿಚಾರಣೆಗೆ ಅಭಿಯೋಜಕರ ಆಕ್ಷೇಪಣೆ ಅಥವಾ ವಾದ ಮಂಡನೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಸುಳ್ಯ ತಾಲೂಕಿನ ಐವರು ವಶಕ್ಕೆ
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವೀಡಿಯೊ ಹಂಚಿಕೆ ಮಾಡಿದ ಆರೋಪದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಐವರನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಂ. ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ಈ ಕುರಿತು ತನಿಖೆ ಮುಂದುವರೆಯುತ್ತಿದೆ.







